ಕಲಬುರಗಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ, ಅವರು ರಾಜ್ಯದ ಮುಖ್ಯಮಂತ್ರಿ ಅಲ್ಲ, ಪ್ರಿಯಾಂಕ್ ಖರ್ಗೆ ಅವರೆ ಸೂಪರ್ ಸಿಎಂ ಆಗಿದ್ದಾರೆಂದು ಬಿಜೆಪಿ ಮುಖಂಡ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದರು. ಕಲಬುರಗಿಗೆ ಭೇಟಿ ನೀಡಿದ್ದ ಅವರು, ಕೋಲಿ- ಕಬ್ಬಲಿಗ ಸಮನ್ವಯ ಸಮಿತಿಯ ಹೋರಾಟದ ವೇದಿಕೆಗೆ ಭೇಟಿ ನೀಡಿ ಮಾತನಾಡುತ್ತಾ, ಕಲಬುರಗಿ ಜಿಲ್ಲೆಯಲ್ಲಿ ಕೋಲಿ ಸಮಾಜದ ಯುವಕನ ಆತ್ಮಹತ್ಯೆಯ ಆರೋಪಿಗೆ ಪ್ರಿಯಾಂಕ್ ಖರ್ಗೆ ರಕ್ಷಣೆ ನೀಡುತ್ತಿದ್ದಾರೆ. ಆರೋಪಿಯನ್ನು ಬಂದಿಸುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಕರ್ನಾಟಕದಲ್ಲಿ ಸಿಎಂ ಹೇಳಿದ್ರು ಅರೆಸ್ಟ್ ಆಗಲ್ಲ. ನಮ್ಮ ಸೂಪರ್ ಸಿಎಂ ಏನು ಹೇಳ್ತಾರೋ ಅದೇ ಕಲಬುರಗಿ ಜಿಲ್ಲೆಯಲ್ಲಿ ಆಗೋದು ಎಂದು ಮಾತಿನಲ್ಲೇ ತಿವಿದರು. ರಾಜ್ಯದಲ್ಲಿ ಯಾವ ಶಾಸಕರ ಬೇಡಿಕೆಗಳು ಸಹ ಈಡೇರುತ್ತಿಲ್ಲ. ಏನು ಹೇಳಿದರೂ ಕೆಲಸ ಆಗುವುದಿಲ್ಲ. ಇದು ನಾನು ಹೇಳುತ್ತಿಲ್ಲ, ಅವರ ಪಕ್ಷದವರೇ ಹೇಳುತ್ತಿದ್ದಾರೆ. ಪ್ರಿಯಾಂಕ ಖರ್ಗೆ ದೊಡ್ಡ ತತ್ವಜ್ಞಾನಿಯಂತೆ ಮಾತಾಡ್ತಾರೆ. ಅವರಂತ ರಕ್ಷಣಾ ತಜ್ಞ, ಕೃಷಿ ಪಂಡಿತ, ಶಿಕ್ಷಣ ತಜ್ಞ ಈ ರಾಜ್ಯದಲ್ಲಿ ಮತ್ತೊಬ್ಬರಿಲ್ಲವೆಂದು ಎನ್.ರವಿಕುಮಾರ್ ವ್ಯಂಗ್ಯವಾಡಿದರು. ಆನೇಕಲ್ ಪಟಾಕಿ ದುರಂತ ಪ್ರಕರಣದ ತನಿಖೆಯಾಗಲಿ: ಅನೇಕಲ್ ಪಟಾಕಿ ದುರಂತದ ಬಗ್ಗೆ ಪ್ರಸ್ತಾಪಿಸುತ್ತ ಇದರ ಹಿಂದೆ ಯಾರಿದ್ದಾರೆ? ಸಮಗ್ರ ತನಿಖೆಯಾಗಬೇಕು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ದುರಂತದಲ್ಲಿ 14 ಜನ ಅಮಾಯಕ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಘೋರ ಅನ್ಯಾಯ, ದುರಂತ ಪ್ರಕರಣ. ಮೃತರ ಕುಟುಂಬದವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ರವಿ ಕುಮಾರ್ ಆಗ್ರಹಿಸಿದರು. ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿಯ ಕೆಲ ನಾಯಕರ ಅಸಮಾಧಾನ ವಿಚಾರವಾಗಿಯೂ ಮಾತನಾಡಿದ ರವಿಕುಮಾರ್, ಜೆಡಿಎಸ್ ಜೊತೆ ಮೈತ್ರಿ ನಮ್ಮ ಪಕ್ಷದ ವರಿಷ್ಠರ ನಿರ್ಣಯ. ನಮ್ಮ ಹೈಕಮಾಂಡ್ ನಿರ್ಣಯವನ್ನ ನಾವು ಸ್ವಾಗತಿಸುತ್ತೇವೆಂದರು. ನಮ್ಮಲ್ಲಿಯೂ ಕೆಲವರು ಅಸಮಾಧಾನ ವ್ಯಕ್ತಪಡಿಸಿರಬಹುದು. ಆದರೆ, ಅದು ಅವರ ವೈಯಕ್ತಿಕ ಹೇಳಿಕೆ, ಜೆಡಿಎಸ್ ಜೊತೆ ಮೈತ್ರಿಯಿಂದ ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಲಾಭ ಹಾಗೆ ಆಗುತ್ತದೆ. ಕಾಂಗ್ರೆಸ್‌ನವರು ಈ ಹಿಂದೆಯೂ 20 ಸ್ಥಾನ ಗೆಲ್ಲುತ್ತೇವೆ ಎಂದಿದ್ದರು, ಈಗಲೂ ಅವರ ಕಥೆ ಅಷ್ಟೇ. ನಾವು ಮತ್ತೊಮ್ಮೆ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.