ಕರಾವಳಿ ಕಾವಲು ಪೊಲೀಸ್(ಸಿಎಸ್‌ಪಿ) ವಿಭಾಗಕ್ಕೆ ಸಂಬಂಧಿಸಿ ಕೆಲವೊಂದು ಸುಧಾರಣೆ ತರುವುದು ಹಾಗೂ ಅವರ ವ್ಯಾಪ್ತಿಯಲ್ಲಿರುವ ಬೋಟ್ ಮತ್ತಿತರ ಸೌಲಭ್ಯಗಳನ್ನು ಉನ್ನತೀಕರಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಂಗಳೂರು: ಕರಾವಳಿ ಕಾವಲು ಪೊಲೀಸ್(ಸಿಎಸ್‌ಪಿ) ವಿಭಾಗಕ್ಕೆ ಸಂಬಂಧಿಸಿ ಕೆಲವೊಂದು ಸುಧಾರಣೆ ತರುವುದು ಹಾಗೂ ಅವರ ವ್ಯಾಪ್ತಿಯಲ್ಲಿರುವ ಬೋಟ್ ಮತ್ತಿತರ ಸೌಲಭ್ಯಗಳನ್ನು ಉನ್ನತೀಕರಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಅವರು ಕರ್ನಾಟಕ ಕರಾವಳಿ ಪೊಲೀಸ್ ಹಾಗೂ ವಿಶೇಷ ಕಾರ್ಯ ಪಡೆ(ಎಸ್‌ಎಎಫ್) ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿಎಸ್‌ಪಿ ಪೊಲೀಸ್ ವ್ಯವಸ್ಥೆಯ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ಪ್ರಸ್ತುತ ಇರುವ ಬೋಟ್‌ಗಳು ಹಳೆಯದಾಗಿದ್ದು, ಕೇವಲ 5 ನಾಟಿಕಲ್ ಮೈಲಿ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಆದರೆ ನಮ್ಮ ಗಡಿ 12 ನಾಟಿಕಲ್ ಮೈಲಿ ವರೆಗೆ ಇದೆ. ಈ ಹಿನ್ನೆಲೆಯಲ್ಲಿ ಹೊಸ ಬೋಟ್‌ಗಳು ಮತ್ತು ಪೊಲೀಸ್ ಠಾಣೆಗಳ ಉನ್ನತೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಈ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.

ಮಂಗಳೂರು ಪೊಲೀಸರ ಉತ್ತಮ ಕಾರ್ಯ: ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಇದ್ದಾಗ ಮಾತ್ರ ಬಂಡವಾಳ ಹೂಡಿಕೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಆರಂಭವಾಗಿರುವ ಸ್ಪೆಷಲ್ ಆಕ್ಷನ್ ಫೋರ್ಸ್ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಲಾಗಿದ್ದು, ಕಮಿಷನರ್, ಎಸ್‌ಪಿ ಸೇರಿದಂತೆ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘಿಸಿದರು.

ಕಮಿಷನರೇಟ್‌ಗೆ ಸಂಬಂಧಿಸಿದ ಪ್ರತ್ಯೇಕ ಪರಿಶೀಲನಾ ಸಭೆಯನ್ನು ಮುಂದಿನ ತಿಂಗಳು ಬೆಳಗಾವಿ ಅಧಿವೇಶನದ ಬಳಿಕ ನಡೆಸಲಾಗುವುದು. ಪ್ರತಿ ತಿಂಗಳು ಜಿಲ್ಲಾವಾರು ಮತ್ತು ಕಮಿಷನರೆಟ್‌ವಾರು ಪರಿಶೀಲನೆ ಮುಂದುವರಿಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.ಎಡಿಜಿಪಿ ಚಂದ್ರಶೇಖರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಇದ್ದರು.

ಬಾಕ್ಸ್‌ಗಳು----

ಮತಾಂತರ ನಿಷೇಧ ಕಾಯ್ದೆ ಪೊಲಿಟಿಕಲ್ ಅಫೇರ್ಸ್ ಕಮಿಟಿಗೆಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವ ವಿಚಾರ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಇದ್ದು, ಜಾರಿಗೆ ತರಲು ಬದ್ಧರಾಗಿದ್ದೇವೆ. ಆದರೆ ಈ ಅಧಿವೇಶನದಲ್ಲಿ ಅದು ಸಾಧ್ಯವಾಗುತ್ತದೋ, ಇಲ್ಲವೋ ಗೊತ್ತಿಲ್ಲ. ಈ ಎರಡೂ ಕಾಯ್ದೆ ಹಿಂಪಡೆಯುವ ವಿಚಾರವನ್ನು ಈಗಾಗಲೇ ಪೊಲಿಟಿಕಲ್ ಅಫೇರ್ಸ್ ಕಮಿಟಿಗೆ ಶಿಫಾರಸು ಮಾಡಲಾಗಿದ್ದು, ಅಲ್ಲಿಂದ ಮುಖ್ಯಮಂತ್ರಿ ಸಲಹೆಯಂತೆ ಮುಂದಿನ ಪ್ರಕ್ರಿಯೆ ನಡೆಯಲಿದೆ. ಆ ಪ್ರಕ್ರಿಯೆ ಇನ್ನಷ್ಟೆ ಪೂರ್ಣಗೊಳ್ಳಬೇಕಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.ಭೂಗತ ಪಾತಕಿಗಳ ಬಾಲ ಬಿಚ್ಚಲು ಬಿಡೋಲ್ಲ: ಭೂಗತ ಪಾತಕಿಗಳಾದ ಕಲಿ ಯೋಗೀಶ್‌ ಮತ್ತು ಹೇಮಂತ್‌ ಪೂಜಾರಿ ವಿದೇಶಗಳಲ್ಲಿ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಪಾತಕಿಗಳು ಬಾಲ ಬಿಚ್ಚಲು ಬಿಡುವುದಿಲ್ಲ, ಬಂಧಿತರನ್ನು ಗಡಿಪಾರು ಪ್ರಕ್ರಿಯೆ ಪೂರೈಸಿಕೊಂಡು ಕರೆತಂದು ತನಿಖೆ ನಡೆಸಲಾಗುವುದು. ನಮ್ಮ ಪೊಲೀಸರು ದೇಶದಲ್ಲೇ ಸಮರ್ಥರಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.