ಸಂಸದನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಪ್ರಿಯಾಂಕ ಕಿಡಿ

| Published : May 05 2024, 02:10 AM IST

ಸಂಸದನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಪ್ರಿಯಾಂಕ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಭ್ಯರ್ಥಿಯ ಕೈಮೇಲೆ ಎತ್ತಿ ಮತ ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಡೀ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆರೋಪಿ ಸಂಸದ ವಿದೇಶಕ್ಕೆ ಓಡಿ ಹೋದರೂ ಅದರ ಬಗ್ಗೆ ಗೊತ್ತೇ ಆಗುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

- ಮಹಿಳಾ ಆತ್ಮನಿರ್ಭರ ಬಗ್ಗೆ ಮಾತನಾಡುವ ಮೋದಿ, ಶಾ ಮೌನಕ್ಕೆ ಆಕ್ರೋಶ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಭ್ಯರ್ಥಿಯ ಕೈಮೇಲೆ ಎತ್ತಿ ಮತ ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಡೀ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆರೋಪಿ ಸಂಸದ ವಿದೇಶಕ್ಕೆ ಓಡಿ ಹೋದರೂ ಅದರ ಬಗ್ಗೆ ಗೊತ್ತೇ ಆಗುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಶನಿವಾರ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸಂಸದನ ಜೊತೆಗೆ ವೇದಿಕೆಯಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಳ್ಳುತ್ತಾರೆ. ಸಂಸದನ ಕುಕೃತ್ಯದ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ವಿದೇಶಕ್ಕೆ ಆತ ಓಡಿ ಹೋದರೂ ಪ್ರಧಾನಿ, ಗೃಹ ಮಂತ್ರಿಗೆ ಗೊತ್ತೇ ಆಗುವುದಿಲ್ಲ ಎಂದರು. ಪ್ರಧಾನಿ, ಗೃಹ ಮಂತ್ರಿಗೆ ದೇಶದ ಪ್ರತಿಯೊಬ್ಬ ನಾಯಕರು, ಮುಖಂಡರ ಚಲನವಲನಗಳ ಇಂಚಿಂಚೂ ಮಾಹಿತಿ ಇರುತ್ತದೆ. ಅಂತಹದ್ದರಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಂಸದ ವಿದೇಶಕ್ಕೆ ಹೋದ ಬಗ್ಗೆ ಮಾಹಿತಿ ಇರುವುದಿಲ್ಲವೇ? ಚುನಾವಣೆ ಸಮಯದಲ್ಲಿ ನಯವಾಗಿ ಮಾತನಾಡುವ, ಮಹಿಳೆಯರ ಆತ್ಮನಿರ್ಭರ ವಿಚಾರವಾಗಿ ಹೇಳುವಪ್ರಧಾನಿ, ಗೃಹ ಮಂತ್ರಿಗಳಂತಹವರು ಅದೇ ಮಹಿಳೆಯರ ಗೌರವಕ್ಕೆ ಧಕ್ಕೆ ಬಂದಾಗಲೆಲ್ಲಾ ಅತ್ಯಾಚಾರಿಗಳು, ದೌರ್ಜನ್ಯ ಎಸಗಿದವರ ಪರ ನಿಲ್ಲತ್ತಾರೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಯಾವ ಬಾಯಿಯಲ್ಲಿ ಮಾತನಾಡುತ್ತಾರೆ ಎಂದು ಪ್ರಿಯಾಂಕ ಹರಿಹಾಯ್ದರು. - - - * ಕಾಂಗ್ರೆಸ್ ಬಗ್ಗೆ ಮೋದಿ ಕೀಳು ಅಪಪ್ರಚಾರಕ್ಕೆ ಪ್ರಿಯಾಂಕ ಗರಂ

- ಪ್ರಚಾರದಲ್ಲಿ ಪಾಕ್ ವಿಚಾರ ಮಾತನಾಡುವ ಮೋದಿಗೆ ಭಾರತದ ಚುನಾವಣೆಯೆಂಬ ಅರಿವಿಲ್ಲವೇ?

- ನಿಮ್ಮ ಚಿನ್ನ ಕಾಂಗ್ರೆಸ್ ಕಸಿಯುತ್ತೆ, ನಿಮ್ಮ ಒಂದು ಎಮ್ಮೆ ಕಸಿಯುತ್ತೆಂಬ ಹೇಳಿಕೆ ನಿರೀಕ್ಷೆ ಮಾಡಿದ್ರಾ? ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆಯಲ್ಲಿ ಪಾಕಿಸ್ತಾನದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಗೆ ಚುನಾವಣೆ ಭಾರತದ್ದು ಎಂಬ ಅರಿವಿಲ್ಲವೇ? ಕಾಂಗ್ರೆಸ್ ಪಕ್ಷ ನೋಟುಗಳ ಎಕ್ಸ್‌-ರೇ ಮಿಷನ್ ತಂದು, ಚಿನ್ನಾಭರಣ ಕದಿಯುತ್ತದೆಂದು, ನಿಮ್ಮ ಮನೆಯಲ್ಲಿ ಎರಡು ಎಮ್ಮೆಗಳಿದ್ದರೆ ಒಂದು ಎಮ್ಮೆ ಬಿಟ್ಟು, ಇನ್ನೊಂದು ಎಮ್ಮೆಯನ್ನು ಕಾಂಗ್ರೆಸ್ ಕಸಿಯುತ್ತದೆಂಬ ಹೇಳಿಕೆ ಮೋದಿಯವರಿಂದ ಇಷ್ಟೊಂದು ಕೀಳುಮಟ್ಟದ ಅಪಪ್ರಚಾರ ನಿರೀಕ್ಷೆ ಮಾಡಿದ್ದಿರಾ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಜನತೆಗೆ ಪ್ರಶ್ನಿಸಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ವಿಶ್ವವಿದ್ಯಾನಿಲಯಗಳು, ಹೆದ್ದಾರಿಗಳು, ಆಸ್ಪತ್ರೆಗಳು ಹೀಗೆ ಎಷ್ಟೆಲ್ಲಾ ಆರಂಭಿಸಿದ್ದೇವೆ. ಅದೇ ರೀತಿ ತಮ್ಮ 10 ವರ್ಷಗಳ ಅವದಿಯಲ್ಲಿ ನರೇಂದ್ರ ಮೋದಿ ದೇಶದಲ್ಲಿ ಎಷ್ಟು ಕೈಗಾರಿಕೆ ಸ್ಥಾಪಿಸಿದರು, ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದರೆಂಬ ಅಭಿವೃದ್ಧಿ ವಿಚಾರಗಳ ಬಗ್ಗೆ ಯಾಕೆ ತಮ್ಮ ಪ್ರಚಾರ ಸಭೆಗಳಲ್ಲಿ ಮಾತನಾಡುತ್ತಿಲ್ಲ ಎಂದರು.

ಇದೀಗ ದೇಶದ ಜನತೆ ಮುಂದೆ ಹೊಸ ಪ್ರಧಾನಿ ಆಯ್ಕೆ ಅವಕಾಶ ಬಂದೊದಗಿದೆ. ದೇಶದ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವ ಕಾಲ ಬಂದಾಗಿದೆ, ಟೀವಿ ಪರದೆಗಳಲ್ಲಿ ಬರುವುದನ್ನು ನೀವು ನಂಬಬೇಡಿ. ವಾಸ್ತವ ಅರಿತು ಮತದಾನ ಮಾಡಿರಿ. ಈಗಾಗಲೇ ಕರ್ನಾಟಕದಲ್ಲಿ ಅಂತಹ ಬದಲಾವಣೆ ಕಾರ್ಯವನ್ನು ಇಲ್ಲಿನ ಮತದಾರರು ಮಾಡಿದ್ದಾರೆ. ಮತದಾರರು ತಮ್ಮ ಭವಿಷ್ಯ, ತಮ್ಮ ಮಕ್ಕಳ ಭವಿಷ್ಯ, ದೇಶದ ಭ‍ವಿಷ್ಯವನ್ನು ಮತ್ತೆ ಹೊಸದಾಗಿ ಬರೆಯುವ ಕಾಲ ಇದಾಗಿದೆ. ನಿಮ್ಮ ಕಷ್ಟ ಸುಖಕ್ಕೆ ಸ್ಪಂದಿಸುವ, ಸುಖ, ದುಃಖದಲ್ಲಿ ಭಾಗಿಯಾಗುವ ಕಾಂಗ್ರೆಸ್ಸಿಗೆ ಆಶೀರ್ವದಿಸಿ. ನೀವು ನಮ್ಮ ಕೈಗಳನ್ನು ಬಲಿಷ್ಟಗೊಳಿಸಿ, ನಾವು ನಿಮ್ಮಗಳ ಭವಿಷ್ಯ, ಬದುಕನ್ನು ಸುಭದ್ರಗೊಳಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಕಾಂಗ್ರೆಸ್ ಜನರ ಹಕ್ಕು, ಅಧಿಕಾರಗಳನ್ನು ಬಲಿಷ್ಠಗೊಳಿಸುತ್ತದೆ. ದೇಶ, ರಾಜ್ಯದ ಜನರ ಬದುಕಿನಲ್ಲಿ ಪರಿವರ್ತನೆ ತರುತ್ತದೆ. ನನ್ನ ಅಜ್ಜಿ ಇಂದಿರಾ ಗಾಂಧಿ ಸಂಕಷ್ಟದಲ್ಲಿದ್ದಾಗ ಕರ್ನಾಟಕದ ನೀವೆಲ್ಲರೂ ಬೆಂಬಲಿಸಿದ್ದಿರಿ. ತಮ್ಮ ಹತ್ಯೆಯಾದಲ್ಲಿ ಒಂದೊಂದು ಹನಿ ರಕ್ತವೂ ದೇಶವನ್ನು ಜೀವಂತಗೊಳಿಸುತ್ತದೆಂದು ನನ್ನ ಅಜ್ಜಿ ತಮ್ಮ ಸಾವಿಗೆ ಒಂದು ದಿನ ಮೊದಲು ಸಭೆಯೊಂದರಲ್ಲಿ ಭಾಷಣ ಮಾಡುವಾಗ ಹೇಳಿದ್ದರು. ನಾನು ಈ ರಾಜ್ಯಕ್ಕೆ ಬಂದಾಗಲೆಲ್ಲ ಇಂದಿರಾ ಗಾಂಧಿ ಅವರ ರಕ್ತದ ಕಣಗಳು ರಾಜ್ಯವನ್ನು ಜೀವಂತವಾಗಿಟ್ಟಿದೆ, ಸಮೃದ್ಧಗೊಳಿಸಿದೆಯೆಂಬ ಭಾವನೆ ಮೂಡುತ್ತದೆ ಎಂದು ತಿಳಿಸಿದರು.

ನೀವು ಈ ಚುನಾವಣೆಯಲ್ಲಿ ಕೈಗೊಳ್ಳಲಿರುವ ತೀರ್ಮಾನವು ಮುಂದಿನ 5 ವರ್ಷ ದೇಶದ ಭವಿಷ್ಯ ನಿರ್ಧರಿಸಲಿದೆ. ಈಗ ಕೇಂದ್ರಲ್ಲಿರುವ ಬಿಜೆಪಿ ಸರ್ಕಾರ ದೇಶದ ಜನರಿಗಾಗಿ ನಡೆಯದೆ ದೊಡ್ಡ ಉದ್ಯಮಿಗಳಿಗಾಗಿ ನಡೆಯುತ್ತಿದೆ. ಇದರಿಂದಾಗಿ 75 ವರ್ಷಗಳಲ್ಲೇ ಅತೀ ಹೆಚ್ಚಿನ ನಿರುದ್ಯೋಗ ಈಗ ದೇಶದಲ್ಲಿದೆ. 70 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದರೆ, 30 ಲಕ್ಷ ಹುದ್ದೆಗಳು ಖಾಲಿ ಇವೆ. ಒಳ್ಳೆಯ ಶಿಕ್ಷಣ, ಜೀವನ ಸಿಗುವ ಸಲುವಾಗಿ ನೀವೆಲ್ಲರೂ ಕಷ್ಟಪಟ್ಟು ಮಕ್ಕಳನ್ನು ಸಲಹುತ್ತೀರಿ. ಮಕ್ಕಳು ಶಿಕ್ಷಿತರಾಗಿ ಒಳ್ಳೆಯ ಉದ್ಯೋಗ ಸಿಗಲೆಂಬುದು ಕಡು ಬಡವರ ಆಸೆಯಾಗಿದೆ ಎಂದು ಅವರು ವಿವರಿಸಿದರು.

- - -

-4ಕೆಡಿವಿಜಿ6:

ದಾವಣಗೆರೆಯಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿಗೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಬೆಳ್ಳಿ ಸ್ಮರಣಿಗೆ ನೀಡಿ, ಸನ್ಮಾನಿಸಿದರು. ರಣದೀಪ್ ಸಿಂಗ್ ಸುರ್ಜೀವಾಲಾ, ಡಿ.ಕೆ.ಶಿವಕುಮಾರ, ಶಾಮನೂರು ಶಿವಶಂಕರಪ್ಪ ಇತರರು ಇದ್ದರು.

-4ಕೆಡಿವಿಜಿ7:

ದಾವಣಗೆರೆಯಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ರಣದೀಪ ಸಿಂಗ್ ಸುರ್ಜೇವಾಲಾ, ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಪ್ರಚಾರ ಸಮಾವೇಶದಲ್ಲಿ.

-4ಕೆಡಿವಿಜಿ8, 9:

ದಾವಣಗೆರೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಜನರತ್ತ ಕೈಮುಗಿಯುತ್ತಿರುವ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ.