ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬೆಳಗೊಳ ಗ್ರಾಮದ ಗ್ರಾಮ ದೇವತೆ ಹಿರಿದೇವಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಜಾತ್ರಾ ಮೈದಾನದ ಆವರಣದಲ್ಲಿ ನಡೆದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಬೆಳಗೊಳದ ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯ ಬೆಂಗಳೂರಿನ ವಿನಾಯಕ ಬಂಡೆ ಹಾಗೂ ಹೊಂಗಳ್ಳಿಯ ನಿಶ್ಚಿತ್ ಅವರ ನಡೆದ ರೋಚಕ ಮಾರ್ಪಿಟ್ ಕುಸ್ತಿಯಲ್ಲಿ ಹೊಂಗಳ್ಳಿ ನಿಶ್ಚಿತ್ ವಿಜೇತರಾದರು. ಕುಸ್ತಿ ಅಭಿಮಾನಿಗಳು ನೀಡಿದ ನಗದು ಹಾಗೂ ಪಾರಿತೋಷಕವನ್ನು ತನ್ನದಾಗಿಸಿಕೊಂಡರು.
ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 70ಕ್ಕೂ ಹೆಚ್ಚು ಹೆಸರಾಂತ ಪೈಲ್ವಾನರು ಆಗಮಿಸಿದ್ದರು. ಕುಸ್ತಿ ಸಮಿತಿ ಸದಸ್ಯರು ವಿವಿಧ ಮಟ್ಟದಲ್ಲಿ ಕುಸ್ತಿ ಸ್ಥಳಲ್ಲಿ ಜೊತೆ ಕಟ್ಟಿ ಕುಸ್ತಿ ನಡೆಸಲಾಯಿತು. ವಿಜೇತರಿಗೆ ಪ್ರಶಸ್ತಿಪತ್ರ ಹಾಗೂ ನಗದು ನೀಡಿ ಗೌರವಿಸಲಾಯಿತು.ಈ ವೇಳೆ ಮಂಡ್ಯ ಜಿಲ್ಲಾ ಗರಡಿ ಸಂಘದ ಅಧ್ಯಕ್ಷ ಪೈ.ವಿಷಕಂಠೇಗೌಡ, ಅಮೆಚೂರ್ ಕುಸ್ತಿ ಸಂಘದ ಕಾರ್ಯದರ್ಶಿ ಮಲ್ಲು ಸ್ವಾಮಿ, ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ್ ಪಾಪು, ಬಿ.ಎಂ.ಸ್ವಾಮೀಗೌಡ, ಗ್ರಾಪಂ ಅಧ್ಯಕ್ಷ ಬಿ.ಸಿ.ಪುಟ್ಟರಾಜು ಸೇರಿದಂತೆ ಇತರ ಕುಸ್ತಿ ಸಮಿತಿ ಸದಸ್ಯರು ಇದ್ದರು. ತೀರ್ಪುಗಾರರಾಗಿ ವೆಂಕಟೇಶ್, ಕೃಷ್ಣ, ಭಾಸ್ಕರ್, ಕುಮಾರ್ ಧನಂಜಯ ಹಾಗೂ ಗ್ರಾಮದ ಜಯಮಾನರು ಇತರ ಪೈಲ್ವಾನರುಗಳು ನಡೆಸಿಕೊಟ್ಟರು.
ಜಾತ್ರಾ ಮಹೋತ್ಸವ:ಗ್ರಾಮದ ದೇವಾಲಯದಲ್ಲಿ ಹಿರಿದೇವಿ ಅಮ್ಮ ಉತ್ಸವ ಮೂರ್ತಿಗೆ ಬೆಳಗಿನಿಂದಲೇ ವಿಶೇಷ ಪೂಜಾಭಿಷೇಕ ಮಾಡಿ, ಬಗೆ ಬಗೆಯ ಹೂವಿನ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಲಾಯಿತು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಬಂದ ಭಕ್ತರಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ನೀಡಿ ಮಂಟಪದ ಆವರಣದಲ್ಲಿ ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿಯಿಂದ ಅನ್ನ ಸಂತರ್ಪಣೆ ಕಾರ್ಯ ನಡೆಸಲಾಯಿತು.