ಅಮಿತ್ ಶಾ ವಿರುದ್ಧ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

| Published : Dec 20 2024, 12:46 AM IST

ಸಾರಾಂಶ

ಒಬ್ಬ ಗೃಹಮಂತ್ರಿಯಾಗಿ ಸಂವಿಧಾನದ ಘನತೆ ಗೌರವ ಎತ್ತಿಹಿಡಿಯಬೇಕಾದ ಅಮಿತ್‌ ಶಾ ಒಬ್ಬ ಮನು ವಾದದ ಪರಮಾಗಿ ಮಾತನಾಡಿದ್ದಾರೆ. ಸಚಿವರ ಹೇಳಿಕೆಯನ್ನು ಸಮರ್ಥಿಸಿ ಕೊಳ್ಳುವ ಮೂಲಕ ಪ್ರಧಾನಿ ಮೋದಿ ಸಹ ತಮ್ಮ ಅವಿವೇಕ ತನವನ್ನು ಪ್ರದರ್ಶಿಸಿದ್ದಾರೆ.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಗೃಹಮಂತ್ರಿ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಲಿತಪರ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರ ಮುಂಭಾಗ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಎದುರು ಸಂಘಟನೆಗಳ ಮುಖಂಡರು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪ್ರತಿಭಟನೆ ನಡೆಸಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.

ಮುಖಂಡರಾದ ಎಂ.ಎನ್.ಜಯರಾಜು ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನ ಭಿಕ್ಷೆಯಿಂದಲೇ ಗೃಹ ಮಂತ್ರಿಯಾಗಿರುವ ಅಮಿತ್ ಶಾ ರಾಜ್ಯಸಭೆಯಲ್ಲಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿರುವುದು ಅವರ ಮೂರ್ಖತನದ ಪರಮಾ ವಧಿಯಾಗಿದೆ ಎಂದು ಖಂಡಿಸಿದರು.

ಒಬ್ಬ ಗೃಹಮಂತ್ರಿಯಾಗಿ ಸಂವಿಧಾನದ ಘನತೆ ಗೌರವ ಎತ್ತಿಹಿಡಿಯಬೇಕಾದ ಅಮಿತ್‌ ಶಾ ಒಬ್ಬ ಮನು ವಾದದ ಪರಮಾಗಿ ಮಾತನಾಡಿದ್ದಾರೆ. ಸಚಿವರ ಹೇಳಿಕೆಯನ್ನು ಸಮರ್ಥಿಸಿ ಕೊಳ್ಳುವ ಮೂಲಕ ಪ್ರಧಾನಿ ಮೋದಿ ಸಹ ತಮ್ಮ ಅವಿವೇಕ ತನವನ್ನು ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವದ ಮಹಾನ್ ಪುರುಷ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡುವುದರ ಜೊತೆಗೆ ದೇಶದ ಜನರ ಕ್ಷಮೆಯಾಚಿಸ ಬೇಕೆಂದು ಆಗ್ರಹಿಸಿದರು.

ಮಾಜಿ ಪುರಸಭಾ ಸದಸ್ಯ ಕಿರಣ್ ಶಂಕರ್ ಮಾತನಾಡಿ, ಅಂಬೇಡ್ಕರ್ ಬಗ್ಗೆ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡದಿದ್ದಲ್ಲಿ ಸೋಮವಾರ ಪಟ್ಟಣದಲ್ಲಿ ಎಲ್ಲಾ ಶೋಷಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯಗಳ ಒಡಗೂಡಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಾರ್ಕಾಲು ಮಾದು, ಬೂಹಳ್ಳಿ ಮಹಾದೇವಯ್ಯ, ಶಾಗ್ಯ ಕೆಂಪಯ್ಯ, ಕಲ್ಕುಣಿ ನಂಜುಂಡಸ್ವಾಮಿ, ಚಿಕ್ಕಸ್ವಾಮಿ, ಬಾಳೆ ಹೊನ್ನಿಗ ಕುಮಾರ್, ಪಂಡಿತಹಳ್ಳಿ ಸುರೇಶ್, ಸಿದ್ದರಾಜು, ವೇದಾವತಿ, ಎಸ್.ಎನ್ ನಾಗರಾಜು, ಸರಗೂರು ಕುಮಾರಸ್ವಾಮಿ, ಪುಟ್ಟಸ್ವಾಮಿ, ಸಿದ್ದರಾಜು, ನಾಗರಾಜು, ಮದನ್ ಬಸವರಾಜು, ಮುದ್ದರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಮಿತ್ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಶಾ ಹೇಳಿಕೆ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಹೋರಾಟಗಾರರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ದೇಶದ ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗವಹಿಸದೆ ಬ್ರಿಟಿಷರ ಪರವಾಗಿದಂತಹ ಆರ್ ಎಸ್ ಎಸ್ ಮತ್ತು ಜನಸಂಘದ ಮುಖಂಡರು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಒಪ್ಪಿರಲಿಲ್ಲ. ಅವರು ಮನುವಾದದ ಭಾಗವಾಗಿರುವ ಮನಸ್ಮೃತಿಯನ್ನು ಹೇರಲು ಹೊರಟಿದ್ದರು ಎಂದು ದೂರಿದರು.

ದೇಶದ ರಾಷ್ಟ್ರಧ್ವಜವನ್ನು ಸಹ ಒಪ್ಪದೇ ಭಗವದ್ವಜ ಈ ದೇಶದ ರಾಷ್ಟ್ರ ಧ್ವಜ ಆಗಬೇಕೆಂದು ಆಗ್ರಹಿಸಿದ್ದರು. ಇಂತಹ ಮನಸ್ಥಿತಿಯ ಪುರೋಹಿತ ಶಾಹಿಯ ಪರವಾಗಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ನೀತಿಗಳನ್ನು ಜಾರಿಗೊಳಿಸಲು ಹೊರಟಿರುವ ಒಕ್ಕೂಟ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಜಿಲ್ಲಾ ಅಧ್ಯಕ್ಷೆ ಡಿ.ಕೆ.ಲತಾ, ಕಾರ್ಯದರ್ಶಿ ಸುಶೀಲ, ತಾಲೂಕು ಅಧ್ಯಕ್ಷೆ ಮಂಜುಳಾ, ಸಿಐಟಿಯು ಮುಖಂಡರಾದ ಮಹದೇವಮ್ಮ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡರಾದ ಎನ್ ಮಹದೇವಯ್ಯ, ನಾಗಮ್ಮ, ನಂಜುಂಡಸ್ವಾಮಿ, ವೆಂಕಟೇಶ, ನಂಜುಂಡ ಸೇರಿದಂತೆ ಇತರರು ಇದ್ದರು.

ಅಂಬೇಡ್ಕರ್ ಕುರಿತು ಹಗುರ ಹೇಳಿಕೆಗೆ ಖಂಡನೆ

ಪಾಂಡವಪುರ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ಹಗುರವಾಗಿ ಹೇಳಿಕೆ ನೀಡಿರುವುದನ್ನು ದಲಿತ ಹೋರಾಟ ಸಮಿತಿಯ ಅಧ್ಯಕ್ಷ ಬೊಮ್ಮರಾಜು ಖಂಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಹೋರಾಟ ಸಮಿತಿಯ ಪದಾಧಿಕಾರಿಗಳ, ಕಾರ್‍ಯಕರ್ತರ ಸಭೆ ನಡೆಸಿ ಬಳಿಕ ಮಾತನಾಡಿ, ಗೃಹಸಚಿವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡಸಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಅಂಬೇಡ್ಕರ್ ಹೆಸರು ಹೇಳುವ ಬದಲು ದೇವರ ಹೆಸರು ಹೇಳಿದರೆ ನೂರು ಜನ್ಮದ ಪುಣ್ಯ ಬರುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ವಿಶ್ವನಾಯಕರು ಅವರ ಹೆಸರು ಸೂರ್ಯ, ಚಂದ್ರ ಇರುವವರೆಗೂ ಅಜರಾಮರವಾಗಿ ಇರುತ್ತದೆ. ಅಂಬೇಡ್ಕರ್ ಹೆಸರು ಬದಲಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಸಣಬದಲ್ಲಿ ದಲಿತ ಯವಕನ ಮೇಲೆ ನಡೆದಿರುವ ದೌರ್ಜನ್ಯ ಕುರಿತು ಸಂಬಂಧಿಸಿದ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಮುಂದೆ ತಾಲೂಕಿನ ದಲಿತರ ಮೇಲೆ ಯಾವುದೆ ದೌರ್ಜನ್ಯ, ದಬ್ಬಾಳಿಕೆ ನಡೆಯದಂತೆ ಕ್ರಮವಹಿಸಬೇಂದು ಒತ್ತಾಯಿಸಿದರು.

ಈ ವೇಳೆ ಜವರಯ್ಯ, ತಾಪಂ ಮಾಜಿ ಸದಸ್ಯ ಅಲ್ಪಳ್ಳಿ ಗೋವಿಂದಯ್ಯ, ಪುರಸಭೆ ಸದಸ್ಯ ಶಿವಕುಮಾರ್, ಮಾಜಿ ಸದಸ್ಯ ರಾಚಯ್ಯ, ಮಲ್ಲಿಗೆರೆ ಜಗದೀಶ್, ಅಂತನಹಳ್ಳಿ ಶಿವಸ್ವಾಮಿ, ಕೆಂಪರಾಜು, ಜಯಲಕ್ಷ್ಮಿ, ನಾಗೇಶ್, ದೇವರಾಜು, ವರದರಾಜು, ಅಶೋಕ, ದ್ಯಾವಯ್ಯ, ಕುಮಾರ ಸೇರಿದಂತೆ ಹಲವರು ಹಾಜರಿದ್ದರು.