ಅಭಿವೃದ್ಧಿಪರ, ಜನಪರ ಬಜೆಟ್‌: ರಮೇಶ್‌ ಕಾಂಚನ್‌

| Published : Mar 07 2025, 11:46 PM IST

ಸಾರಾಂಶ

ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಎಲ್ಲರನ್ನೂ ಒಳಗೊಂಡ ಸಮಗ್ರವಾದ ಬಜೆಟ್ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ತನ್ನ ದಾಖಲೆಯ 16ನೇ ಬಜೆಟ್ ಸರ್ವ ಜನರಿಗೆ ಸಮಪಾಲು ಸಮಬಾಳು ನೀಡುವುದಾಗಿದೆ. ಗ್ಯಾರಂಟಿ ಯೋಜನೆ ಗಳಿಗೆ 51 ಸಾವಿರ ಕೋಟಿ ರು. ಅನುದಾನ ಮೀಸಲಿಡುವುದರ ಮೂಲಕ ವಿರೋಧ ಪಕ್ಷಗಳ ಹೇಳಿಕೆಗಳು ಸುಳ್ಳು ಎನ್ನುವುದನ್ನು ಸಾಬೀತುಪಡಿಸಿದ್ದಾರೆ, ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಎಲ್ಲರನ್ನೂ ಒಳಗೊಂಡ ಸಮಗ್ರವಾದ ಬಜೆಟ್ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಕರಾವಳಿಗೆ ಹಾಗೂ ಮೀನುಗಾರ ಸಮುದಾಯಕ್ಕೆ ಭರ್ಜರಿ ಯೋಜನೆಗಳನ್ನು ನೀಡಿರುವ ಸಿದ್ದರಾಮಯ್ಯ ಅವರು ಮಲ್ಪೆಯಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆ, ಮೀನುಗಾರಿಕಾ ನೀತಿ ಜಾರಿಗೆ ಪ್ರಯತ್ನ, ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿ, ಕಡಲ ತೀರದ ಅಭಿವೃದ್ಧಿ, ರಸ್ತೆ ಬದಲಿ ಸೌಲಭ್ಯಗಳ ಉನ್ನತೀಕರಣ, ಉಡುಪಿ ಜಿಲ್ಲಾ ಕ್ರೀಡಾಂಗಣಕ್ಕೆ ಅನುದಾನ, ಸಮುದ್ರ ಕೊರೆತ ತಡೆಗಟ್ಟುವಿಕೆಗೆ ರೂ 200 ಕೋಟಿ ಅನುದಾನ ಸೇರಿದಂತೆ ಹಲವಾರು ಬಂಪರ್ ಯೋಜನೆಗಳನ್ನು ಘೋಷಣೆ ಮಾಡಿರುತ್ತಾರೆ.

ರಾಜ್ಯಾದ್ಯಂತ ಅಕ್ಕ ಕೆಫೆ ಮತ್ತು ಅಕ್ಕ ಸಹಕಾರಿ ಸಂಘಗಳನ್ನು ಸ್ಥಾಪಿಸಲು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಅಕ್ಕ ಕೆಫೆ ಸ್ಥಾಪನೆಯಾಗಲಿದೆ. ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನ 1 ಸಾವಿರ ರು. ಹಾಗೂ ಸಹಾಯಕಿಯರ ಮಾಸಿಕ ಗೌರವಧನ 750 ರು.ನಷ್ಟು ಹೆಚ್ಚಿಸುವ ಭರವಸೆಯನ್ನು ಬಜೆಟ್ ನಲ್ಲಿ ನೀಡಿದ್ದಾರೆ.

ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಮಾಸಿಕ ಗೌರವಧನ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಬಿಸಿಯೂಟ ಸಿಬ್ಬಂದಿಗೂ ವೇತನ ಏರಿಕೆ ಆಗಲಿದೆ. ಹೆಚ್ಚುವರಿಯಾಗಿ, 100 ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿಯೂ, 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿಯೂ ಉನ್ನತೀಕರಿಸಲಾಗುವುದು ಎಂದು ಘೋಷಿಸಿದ್ದಾರೆ. ಶಾಲಾ ಮಕ್ಕಳಿಗೆ . ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು 1,500 ಕೋಟಿ ರು. ಮೀಸಲಿಡಲಾಗಿದ್ದು, ಅಜೀಂ ಪ್ರೇಮ್ ಜಿ ಸಂಸ್ಥೆಯ ಸಹಯೋಗದಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ .

ಧಾರ್ಮಿಕ ದತ್ತಿ ಇಲಾಖೆಯ ಅರ್ಚಕರಿಗೆ ನೀಡುತ್ತಿರುವ ತಸ್ತೀಕ್ ನ್ನು 60 ಸಾವಿರ ರು.ನಿಂದ 72 ಸಾವಿರಕ್ಕೆ ಏರಿಸಲಾಗಿದೆ ಕರ್ನಾಟಕ ದೇವಾಲಯ ವಸತಿ ಕೋಶ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ದೇವಾಲಯಗಳ ಛತ್ರಗಳಲ್ಲಿ ರೂಮ್ ಬುಕಿಂಗ್ ವ್ಯವಸ್ಥೆಯ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.

ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಜನಸ್ನೇಹಿಯಾಗಿದ್ದು ಸರ್ವ ವರ್ಗದ ಜನತೆಯ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಮತ್ತೊಮ್ಮೆ ಜನಪರ ಮುಖ್ಯಮಂತ್ರಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.ಅದಕ್ಕಾಗಿ ರಾಜ್ಯದ ಸಮಸ್ತ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಅಭಿನಂದನೆ ಸಲ್ಲಿಸುವುದಾಗಿ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.