ಕನ್ನಡ ಪರ ಸಂಘಟನೆಗಳು ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಕನ್ನಡ ಪರ ಸಂಘಟನೆಗಳು ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶ್ಲಾಘಿಸಿದರು.

ನಗರದ ಮೋಹನ್ ಮಾರ್ಕೇಟ್ ಸಮೀಪದ ಸಿಂಧೆ ಕಾಂಪ್ಲೆಕ್ಸ್‌ನಲ್ಲಿ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಕನ್ನಡದ ನೆಲ, ಜಲ ಸಂರಕ್ಷಣೆಗೆ ಹೋರಾಟ ನಡೆಸಿವೆ. ಅನ್ಯ ಭಾಷೆಗಳ ದಬ್ಬಾಳಿಕೆ ವಿರುದ್ಧವೂ ಧ್ವನಿ ಎತ್ತಿವೆ ಎಂದರು.

ಕನ್ನಡ ಭಾಷೆ ಸದೃಢವಾಗಿರುವಲ್ಲಿ, ಆರೋಗ್ಯಕರ ಪರಿಸರದಲ್ಲಿ ಉಸಿರಾಡುವಲ್ಲಿ ಕನ್ನಡಾಭಿಮಾನಿ ಯುವಕರ ಕೊಡುಗೆ ಪ್ರಮುಖವಾಗಿದೆ. ನಮ್ಮ ಕರ್ನಾಟಕ ಸೇನೆ ಕನ್ನಡ ನಾಡು ಹಾಗೂ ನುಡಿಯ ಹಿತಕ್ಕೆ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಸೇನೆ ರಾಜ್ಯ ಅಧ್ಯಕ್ಷ ಬಸವರಾಜ ಪಡಕೋಟೆ ಮಾತನಾಡಿ, ಸಂಘಟನೆಯ ಬೀದರ್ ಜಿಲ್ಲಾ ಘಟಕ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದೆ. ಜಿಲ್ಲಾ ಘಟಕದ ಕಾರ್ಯಗಳಿಗೆ ರಾಜ್ಯ ಘಟಕದ ಬೆಂಬಲ ಸದಾ ಇರಲಿದೆ ಎಂದು ತಿಳಿಸಿದರು.

ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಯುವಕರು ದುಶ್ಚಟಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ನಾಡು, ನುಡಿಯ ಅಭಿಮಾನ ಬೆಳೆಸಿಕೊಳ್ಳಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಮಾತನಾಡಿ, ಸೇನೆ ಗಡಿ ಜಿಲ್ಲೆಯನ್ನು ಕನ್ನಡಮಯಗೊಳಿಸಲು ನಿರಂತರ ಶ್ರಮಿಸುತ್ತಿದೆ. ಬರುವ ದಿನಗಳಲ್ಲಿ ಗಡಿಯಲ್ಲಿ ಕನ್ನಡ ಸಮೃದ್ಧವಾಗಿ ಕಟ್ಟಲು ಹಾಗೂ ಅನ್ಯಾಯದ ವಿರುದ್ಧ ಹೋರಾಡಲು ಸಿದ್ಧವಿದೆ ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಶೇಖಾಪೂರ, ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಪಡಕೋಟೆ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಗಾಂಧಿಗಂಜ್ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಪ್ರಮುಖರಾದ ವಿವೇಕ ವಾಲಿ, ಈಶ್ವರ ಸಿಂಗ್ ಠಾಕೂರ್, ಸಂತೋಷ್ ಪಾಟೀಲ, ಮಹೇಶ್ವರ ಸ್ವಾಮಿ, ಸಿದ್ದು ಮಣಗೆ, ವಿಶ್ವನಾಥ ದಿಮ್ಮೆ, ಅರುಣಕುಮಾರ ಪಾಟೀಲ, ವಿಕ್ರಮ ಮುದಾಳೆ, ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಪದಾಧಿಕಾರಿಗಳಾದ ರಮೇಶ ಚಿದ್ರಿ, ರಾಜಕುಮಾರ ಪಾಟೀಲ, ಗಿರೀಶ್ ಬಿರಾದಾರ, ಅನಿಲ ರಾಜಗೀರಾ ಮತ್ತಿತರರು ಇದ್ದರು.