ಸಾರಾಂಶ
ಬಳ್ಳಾರಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ತಂಡಕ್ಕೆ(ಎನ್‌ಐಎ) ಒಪ್ಪಿಸುವಂತೆ ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ತನಿಖೆ ಮಾಡಲು ಸರ್ಕಾರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್) ನೀಡಬಾರದು. ಎಫ್ಎಸ್‌ಎಲ್ ಮೇಲೆ ರಾಜ್ಯ ಸರ್ಕಾರ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರೀಯ ತನಿಖಾ ತಂಡದಿಂದಲೇ ತನಿಖೆ ನಡೆಸುವಂತಾಗಬೇಕು. ಆಗ ಮಾತ್ರ ಸತ್ಯಾಂಶ ಹೊರ ಬರಲಿದೆ ಎಂದರು.ಪ್ರಜಾಪ್ರಭುತ್ವದ ದೇವಸ್ಥಾನ ಎಂದೇ ಭಾವಿಸುವ ವಿಧಾನಸೌಧದಲ್ಲಿಯೇ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಾರೆ. ನಮ್ಮ ದೇಶದ ಬಿರ್ಯಾನಿ ತಿಂದು ಪಾಕ್ ಪರ ಘೋಷಣೆ ಕೂಗುವವರು ಮುಂದೆ ವಿಧಾನಸೌಧಕ್ಕೆ ಬಾಂಡ್ ಇಟ್ಟರೂ ಅಚ್ಚರಿಯಿಲ್ಲ ಎಂದರು.
ಘಟನೆಯನ್ನು ಇಡೀ ರಾಜ್ಯವೇ ಖಂಡಿಸುತ್ತಿದೆ. ಆದರೆ, ಕಾಂಗ್ರೆಸ್ ನಾಯಕರು ಮಾತ್ರ ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಕೈ ನಾಯಕರು ಕ್ಲೀನ್ ಚಿಟ್ ನೀಡಿದ್ದಾರೆ. ಹೀಗಾಗಿಯೇ ನಮಗೆ ಎಫ್‌ಎಸ್‌ಎಲ್ ವರದಿ ಮೇಲೆ ನಂಬಿಕೆಯಿಲ್ಲ. ಸರ್ಕಾರ ತನಿಖಾ ವರದಿಯನ್ನು ತಮಗೆ ಬೇಕಾದಂತೆ ತಿರುಚುವ ಸಾಧ್ಯತೆ ಇರುವುದರಿಂದ ಕೇಂದ್ರೀಯ ತನಿಖಾ ತಂಡದಿಂದ ಪ್ರಕರಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.ರಾಜ್ಯಸಭಾ ಸದಸ್ಯನಾಗಿ ಎರಡನೇ ಬಾರಿ ಆಯ್ಕೆಗೊಂಡಿರುವ ಬಳ್ಳಾರಿಯ ಸೈಯದ್ ನಾಸಿರ್ ಹುಸೇನ್ ಬಗ್ಗೆ ನನಗೆ ಗೌರವವಿದೆ. ಆದರೆ, ಪಾಕ್ ಪರ ಘೋಷಣೆಯ ಘಟನೆಯನ್ನು ಅವರು ಅಲ್ಲಿಯೇ ಖಂಡಿಸಬೇಕಾಗಿತ್ತು. ವಿನಾಕಾರಣ ಮಾಧ್ಯಮದವರ ಬಗ್ಗೆ ಏಕವಚನದಲ್ಲಿ ಹರಿಹಾಯ್ದು ಅಪಮಾನ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿಕೊಂಡಿರುವೆ. ಈಗಾಗಲೇ ವೈ. ದೇವೇಂದ್ರಪ್ಪ ಅವರು ಹಾಲಿ ಸಂಸದರಿದ್ದಾರೆ. ಅವರು ಸಹ ಟಿಕೆಟ್‌ಗೆ ಪ್ರಯತ್ನಿಸುತ್ತಿರಬಹುದು. ಪಕ್ಷ ಯಾರಿಗೇ ಕೊಡಲಿ, ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ನನಗೆ ಕೊಡುವಂತೆ ಸಹಜವಾಗಿ ಮನವಿ ಮಾಡಿಕೊಂಡಿರುವೆ ಎಂದರು.ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಿಜೆಪಿಗೆ ಮತ್ತೆ ಕರೆತರುವುದರಿಂದ ಪಕ್ಷಕ್ಕೆ ಮತ್ತಷ್ಟೂ ಶಕ್ತಿ ಬರಲಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಚರ್ಚಿಸಿದ್ದೇನೆ. ರೆಡ್ಡಿ ಬಂದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿರುವೆ ಎಂದರಲ್ಲದೆ, ಜನಾರ್ದನ ರೆಡ್ಡಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಸಭಾ ಚುನಾವಣೆ ವೇಳೆ ಶಾಸಕ ಎಸ್.ಟಿ. ಸೋಮಶೇಖರ್ ಅವರು ಅಡ್ಡಮತದಾನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಸೋಮಶೇಖರ್ ಅವರು ಆತ್ಮಸಾಕ್ಷಿಗೆ ಮತಹಾಕಿದ್ದೇನೆ ಎಂದಿದ್ದಾರೆ. ಹಾಗೆಂದರೇನು ಎಂದು ಬೆಂಗಳೂರಿನಲ್ಲಿ ಭೇಟಿಯಾದಾಗ ಕೇಳುವೆ ಎಂದರು. ಸೋಮಶೇಖರ್ ಅವರ ನಿಲುವು ಕುರಿತು ಪಕ್ಷವೇ ಸೂಕ್ತ ತೀರ್ಮಾನ ಮಾಡಲಿದೆ ಎಂದರು.ಪಾಕ್ ಪ್ರೇಮಿಗಳಿಗೆ ನಾವೇ ಫ್ಲೈಟ್ ಜಾರ್ಜ್ ಕೊಟ್ಟು ಕಳಿಸಿಕೊಡುತ್ತೇವೆ...
ಭಾರತದಲ್ಲಿದ್ದು ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. ಒಂದು ವೇಳೆ ಭಾರತದಲ್ಲಿರಲು ಅವರಿಗೆ ಇಷ್ಟವಿಲ್ಲ ಎಂದಾದರೆ ಪಾಕಿಸ್ತಾನಕ್ಕೆ ಹೋಗಲಿ. ಬೇಕಾದರೆ ನಾವೇ ಫ್ಲೈಟ್ ಜಾರ್ಜ್ ಕೊಟ್ಟು ಪಾಕಿಸ್ತಾನಕ್ಕೆ ಕಳಿಸಿಕೊಡುತ್ತೇವೆ ಎಂದು ಶ್ರೀರಾಮುಲು ಹೇಳಿದರು.ಗೆಲ್ಲುವ ಅರ್ಹತೆಯಿಲ್ಲ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡುವ ಬಿ.ಕೆ. ಹರಿಪ್ರಸಾದ್ ಅವರಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಅರ್ಹತೆಯೂ ಇಲ್ಲ. ಹಿಂಬಾಗಿಲಿನಿಂದ ಗೆದ್ದುಬರುವ ಹರಿಪ್ರಸಾದ್, ನಾಲ್ಕು ಮಾತು ಕಲಿತಿದ್ದೇನೆ ಎಂದು ಪ್ರಧಾನಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.