ಪಾಕ್ ಪರ ಘೋಷಣೆ ದೇಶದ್ರೋಹ ಚಟುವಟಿಕೆ: ಬಿಜೆಪಿ

| Published : Feb 29 2024, 02:03 AM IST

ಸಾರಾಂಶ

ಕಾಂಗ್ರೆಸ್ ರಾಜ್ಯಸಭೆ ಚುನಾವಣೆ ವಿಜೇತ ನಾಸಿರ್ ಹುಸೇನ್ ಬೆಂಬಲಿಗರ ಪಾಕ್ ಪರ ಘೋಷಣೆ ಆರೋಪದ ವಿರುದ್ದ ಬುಧವಾರ ಅರಸೀಕೆರೆ ತಾಲೂಕು ಬಿಜೆಪಿ ಘಟಕದಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಬಿಜೆಪಿ ಘಟಕ ಪ್ರತಿಭಟನೆ । ನಾಸೀರ್ ಹುಸೇನ್ ಬೆಂಬಲಿಗರ ವರ್ತನೆ ಬಗ್ಗೆ ಕಿಡಿ । ನಾಸಿರ್‌ ಆಯ್ಕೆ ರದ್ದತಿಗೆ ರಾಜ್ಯಪಾಲರಿಗೆ ಮನವಿ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕಾಂಗ್ರೆಸ್ ರಾಜ್ಯಸಭೆ ಚುನಾವಣೆ ವಿಜೇತ ನಾಸಿರ್ ಹುಸೇನ್ ಬೆಂಬಲಿಗರ ಪಾಕ್ ಪರ ಘೋಷಣೆ ಆರೋಪದ ವಿರುದ್ದ ಬುಧವಾರ ತಾಲೂಕು ಬಿಜೆಪಿ ಘಟಕದಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಮೇಶ್ ದುಮ್ಮೇನಹಳ್ಳಿ ಮಾತನಾಡಿ, ನಾಸಿರ್ ಹುಸೇನ್ ಬೆಂಬಲಿಗರ ವರ್ತನೆ ಮತ್ತು ಪಾಕ್ ಪರ ಘೋಷಣೆ ದೇಶದ್ರೋಹದ ಚಟುವಟಿಕೆಗಳಾಗಿವೆ. ಮಾದ್ಯಮಗಳ ಕಾರ್ಯಚಟುವಟಿಕೆಗಳನ್ನು ಪ್ರಶ್ನಿಸುವ ಮತ್ತು ಅವರನ್ನು ಹತ್ತಿಕ್ಕುವ ದುರ್ನಡತೆ ಇಂದಿನ ಕಾಂಗ್ರೆಸ್ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಹಿಂದೆಂದೂ ವಿಧಾನಸೌಧದಲ್ಲಿ ಇಂತಹ ದೇಶದ್ರೋಹ ಹೇಳಿಕೆಗಳ ದಾಖಲೆಗಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎಲ್ಲಾ ಧರ್ಮ ಮತ್ತು ಜಾತಿಗಳವರು ಮತಗಳನ್ನು ಹಾಕಿದ್ದಾರೆ. ಆದರೆ ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳದೇ ಅಲ್ಪ ಸಂಖ್ಯಾತರನ್ನು ಓಲೈಸಿಕೊಳ್ಳುವ ಸಲುವಾಗಿ ಮೌನಕ್ಕೆ ಜಾರಿದೆ. ತಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿ.ವಿ ಬಸವರಾಜು, ಸಂವಿಧಾನದ ನಾಲ್ಕನೇ ಸ್ತಂಭವಾದ ಮಾದ್ಯಮದವರ ಮೇಲೆ ದಬ್ಬಾವಳಿ ಮಾಡುವ ಮೂಲಕ ಮಾಧ್ಯಮದವರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ. ನಾಸಿರ್ ಹುಸೇನ್ ಮತ್ತು ಅವರ ಸಂಗಡಿಗರ ದೇಶದ್ರೋಹಿ ನಡವಳಿಕೆ ಕಾಂಗ್ರೆಸ್ ದೇಶ ವಿರೋಧಿ ಸಂಸ್ಕೃತಿ ತೋರಿಸುತ್ತಿದೆ. ಇಂತಹ ವ್ಯಕ್ತಿಗಳ ರಾಜ್ಯಸಭೆ ಆಯ್ಕೆ ಅಸಿಂಧುವಾಗಿದೆ. ರಾಜ್ಯಾದ್ಯಂತ ಈ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯಸಭೆ ಚುನಾವಣೆ ವಿಜೇತ ನಾಸಿರ್ ಹುಸೇನ್ ಅಯ್ಕೆ ರದ್ದುಪಡಿಸಬೇಕು ಎಂದು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.

ಆರ್‌ಎಸ್‌ಎಸ್‌ ಹಿರಿಯ ಮುಖಂಡ ಸತ್ಯನಾರಾಯಣ ಮಾತನಾಡಿ, ಭಾರತವು ಯಾವುದೇ ಧರ್ಮ, ಸಮುದಾಯಗಳಿಗೆ ತಾರತಮ್ಯ ಮಾಡದೇ ಸಮಾನ ಅವಕಾಶಗಳನ್ನು ನೀಡುತ್ತಿದೆ. ಹಿಂದು ಸಮುದಾಯ ಹೊರತುಪಡಿಸಿ ಇನ್ನಿತರೆ ಸಮುದಾಯದ ತಲೆಮಾರಿನವರು ಮೂಲ ಹಿಂದೂಗಳೇ ಆಗಿದ್ದಾರೆ. ಈ ಸತ್ಯಾಂಶ ಅರಿಯದ ಕೆಲವರು ರಾಜಕೀಯ ದುರುದ್ದೇಶಕ್ಕೆ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವುದರ ಮೂಲಕ ದೇಶದ್ರೋಹಿ ಚಟುವಟಿಕೆಗಳಿಗೆ ಮತ್ತು ಹೇಳಿಕೆಗಳಿಗೆ ಮಾತ್ರ ಕಾಂಗ್ರೆಸ್ ಸೀಮಿತಗೊಳಿಸುತ್ತಿದೆ. ಇಂತಹ ತುಚ್ಛೀಕರಣದ ರಾಜಕೀಯ ದೇಶದ ಸಾರ್ವಭೌಮತ್ಯಕ್ಕೆ ಧಕ್ಕೆಯಾಗಲಿದ್ದು, ನೂತನ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಮತ್ತು ಸಂಗಡಿಗರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಪುರುಷೋತ್ತಮ, ವಕೀಲ ಶಿವರಾಜ್ ಕೆಂಪುಸಾಗರ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ವಿಜಯಕುಮಾರ್ ಅಣ್ಣಾಯಕನ ಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ತೇಜಸ್ ಯಾದಾಪುರ, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಮುಖಂಡರಾದ ಡಿ.ಬಿ. ಗಂಗಾಧರ್, ವಿಜಯ್ ವಿಕ್ರಂ, ಕಾಟಿಕೆರೆ ಪ್ರಸನ್ನಕುಮಾರ್, ವಿನೋದ್ ಜೈನ್, ಚೇತನ್ ಅಗ್ಗುಂದ, ಸುನೀಲ್ ಶಾಸ್ತ್ರಿ, ರುದ್ರೇಶ್ ಬಾಬು, ವಿನೋದ್ ಕುಟ್ಟಿ, ಸಿದ್ದು, ರವಿ, ವಸಂತ್ ಗೌಡ, ಸರ್ವೇ ಚಂದ್ರು, ಚೇತನ್ ಜೈನ್, ಅವಿನಾಶ್ ನಾಯ್ಡು ಇದ್ದರು.

ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಜಮಾಯಿಸಿದ್ದ ತಾಲೂಕು ಬಿಜೆಪಿ ಘಟಕ ಕಾಂಗ್ರೆಸ್ ರಾಜ್ಯಸಭೆ ಚುನಾವಣೆ ವಿಜೇತ ನಾಸಿರ್ ಹುಸೇನ್, ಅವರ ಬೆಂಬಲಿಗರ ವಿರುದ್ಧ ಬುಧವಾರ ತೀವ್ರ ಪ್ರತಿಭಟನೆ ನಡೆಸಿದರು.