ಸಾರಾಂಶ
ಕೂಡಲೇ ದೇಶ ವಿರೋಧಿ ಹೇಳಿಕೆ ನೀಡಿರುವ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹೊಸಪೇಟೆ: ವಿಧಾನಸೌಧದಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಬಳಿಕ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ, ತಳ್ಳಾಟವೂ ನಡೆಯಿತು.
ನಗರದ ಬಿಜೆಪಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಡಾ. ಪುನೀತ್ ರಾಜಕುಮಾರ್ ವೃತ್ತದಲ್ಲಿ ಮಾನವ ಸರಪಳಿಯಾಗಿ ಪರಿವರ್ತನೆಗೊಂಡಿತು. ನಂತರ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಕಾಲೇಜು ರಸ್ತೆಯಲ್ಲಿ ಕಾಂಗ್ರೆಸ್ ಕಚೇರಿ ಬಳಿ ಜಮಾಯಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದಕ್ಕೆ ಪೊಲೀಸರು ಅವಕಾಶ ಮಾಡದೇ ಇರುವುದರಿಂದ ಪ್ರತಿಭಟನಾಕಾರರು ರಸ್ತೆಯಲ್ಲಿ ಪ್ರತಿಭಟನೆ ಮುಂದುವರಿಸಿದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿರುವ ನಾಸೀರ್ ಹುಸೇನ್ ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿಗರಿರಬೇಕು. ಕೂಡಲೇ ದೇಶ ವಿರೋಧಿ ಹೇಳಿಕೆ ನೀಡಿರುವ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.
ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ್ ಕಮಟಗಿ, ಮುಖಂಡರಾದ ನಾಗರಾಜ್, ಸೂರಿ ಬಂಗಾರು, ಬಿ. ಪ್ರದೀಪ್, ಸಚಿನ್ ಕುಮಾರ್, ನಂದಿ ವಿಕ್ರಮ್, ಶ್ರೀಕಾಂತ್ ಪೂಜಾರ್, ರೇವಣ ಸಿದ್ದಪ್ಪ, ಮಧುರಚನ್ನಶಾಸ್ತ್ರಿ, ರಾಘವೇಂದ್ರ, ದಿವಾಕರ್ ಗೌಡ, ಪುನೀತ್ ಕುಮಾರ್, ಕವಿತಾ, ಅನುರಾಧಾ, ಭಾರತಿ ಮತ್ತಿತರರಿದ್ದರು. ನಗರದ ಪಟ್ಟಣ ಠಾಣೆ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.