ಪಾಕಿಸ್ತಾನ ಪರ ಘೋಷಣೆ: ಕ್ರಮಕ್ಕೆ ಒತ್ತಾಯ

| Published : Feb 29 2024, 02:10 AM IST

ಸಾರಾಂಶ

ರಾಮನಗರ: ಪಾಕಿಸ್ತಾನ ಪರ ಘೋಷಣೆ ಕೂಗಿದ ರಾಜ್ಯಸಭೆ ನೂತನ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಪಾಕಿಸ್ತಾನ ಪರ ಘೋಷಣೆ ಕೂಗಿದ ರಾಜ್ಯಸಭೆ ನೂತನ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದ ಕಾರ್ಯಕರ್ತರು, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಹಿಂದೂ ವಿರೋಧಿ ಹೇಳಿಕೆಗಳು ಹಾಗೂ ಕೃತ್ಯಗಳು ಜರುಗತ್ತಲೇ ಇದೆ. ಒಂದು ಕಡೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆ. ಮತ್ತೊಂದು ಕಡೆ ಭಾರತ ತುಂಡರಿಸುವ ಹೇಳಿಕೆ ನೀಡುತ್ತದೆ. ಇದರ ಮುಂದುವರೆದ ಭಾಗವಾಗಿ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿಯೇ ಶತ್ರು ದೇಶ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂದು ದೂರಿದರು.

ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಸಮ್ಮುಖದಲ್ಲಿಯೇ ಪಾಕ್ ಪರ ಘೋಷಣೆ ಕೂಗಲಾಗಿದೆ. ಆದರೂ, ಅವರು ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಪಾಕ್ ಪರ ಘೋಷಣೆ ಕೂಗಿದ ಗೂಂಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಮನಗರ ನಗರ ಮಂಡಲ ಅಧ್ಯಕ್ಷ ದರ್ಶನ್ ರೆಡ್ಡಿ ಮಾತನಾಡಿ, ಕಾಂಗ್ರೇಸ್ ನೇತೃತ್ವದ ರಾಜ್ಯ ಸರಕಾರ ಹಿಂದೂ ವಿರೋಧಿ ಹಾಗೂ ದೇಶ ವಿರೋಧಿ ಎಂಬುದು ಸಾಬೀತಾಗಿದೆ. ಇತ್ತೀಚಿಗೆ ರಾಮನಗರದಲ್ಲಿ ವಕೀಲರು ನಡೆಸಿದ ಹೋರಾಟದಲ್ಲಿ ಸರ್ಕಾರ ಹೇಗೆ ನಡೆದುಕೊಂಡಿತು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.

ಕೆಂಗಲ್ ಹನುಮಂತಯ್ಯ ನಿರ್ಮಿಸಿದ ಹಾಗೂ ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದಲ್ಲಿ ಶತ್ರು ರಾಷ್ಟ್ರ ಮತ್ತು ರಾಷ್ಟ್ರದ ಪರ ಘೋಷಣೆ ಕೂಗಿರುವುದು ಖಂಡನೀಯ. ಶತ್ರು ರಾಷ್ಟ್ರವೆಂದರೆ ಕಾಂಗ್ರೆಸ್ ನವರಿಗೆ ಅಷ್ಟೊಂದು ವ್ಯಮೋಹವೇ ಎಂದು ಪ್ರಶ್ನಿಸಿದ ಅವರು, ಪಾಕ್ ಪರ ಘೋಷಣೆ ಕೂಗಿದವರನ್ನು ಜೈಲಿಗೆ ಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಮಾತನಾಡಿ, ಪಾಕ್ ಪರ ಘೋಷಣೆಯು ಕಾಂಗ್ರೆಸ್ ಮನಸ್ಥಿತಿಯನ್ನು ತಿಳಿಸುತ್ತದೆ. ದೇಶದಲ್ಲಿದ್ದುಕೊಂಡು ಪರ ದೇಶದ ಪರ ಘೋಷಣೆ ಕೂಗುವುದು ದೇಶದ್ರೋಹದ ಕೆಲಸವಾಗಲಿದ್ದು, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಾಮನಗರ ಗ್ರಾಮಾಂತರ ಮಂಡಲ ಅಧ್ಯಕ್ಷ ಪ್ರಕಾಶ್, ಕನಕಪುರ ಗ್ರಾಮಾಂತರ ಅಧ್ಯಕ್ಷ ಮುರಳಿ, ಮುಖಂಡರಾದ ಕಿಶನ್, ಚಂದ್ರಶೇಖರ್ ರೆಡ್ಡಿ, ರುದ್ರದೇವರು, ನಾಗೇಶ್ , ಜೆಡಿಎಸ್ ಮುಖಂಡರಾದ ಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

28ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.