ಸಾರಾಂಶ
ಬಸವರಾಜ ಹಿರೇಮಠ
ಶಿಗ್ಗಾಂವಿ: ತಾಲೂಕಿನ ಕುನ್ನೂರು ಗ್ರಾಮದಿಂದ ಶ್ಯಾಡಂಬಿಗೆ ಹೋಗುವ ರಸ್ತೆ ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ೪ ಸಂಪರ್ಕಿಸುವ ರಸ್ತೆ ಇಕ್ಕಟ್ಟಾಗಿದ್ದು, ಬೆಣ್ಣೆಹಳ್ಳದ ಕಾಲುವೆ ತಡೆಗೋಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಇನ್ನಷ್ಟು ಸಮಸ್ಯೆಯಾಗಿದೆ.ತಾಲೂಕಿನ ಕುನ್ನೂರ ಶ್ಯಾಡಂಬಿ ರಸ್ತೆ ಮಧ್ಯೆ ಬೆಣ್ಣೆಹಳ್ಳಕ್ಕೆ ₹೮೫ ಲಕ್ಷ ವೆಚ್ಚದಲ್ಲಿ ಬ್ರಿಜ್ ಹಾಗೂ ಹಳ್ಳದ ರಸ್ತೆಯ ಪಕ್ಕದ ಕಾಲುವೆಗೆ ತಡೆಗೋಡೆ ನಿರ್ಮಿಸಲು ೨೦೨೦-೨೧ರಲ್ಲಿ ಮಂಜೂರಾತಿ ದೊರೆತಿತ್ತು. ಅದರಂತೆ ಬ್ರಿಜ್ ನಿರ್ಮಾಣವಾಯಿತು. ಆದರೆ ತಡೆಗೋಡೆ ಕಾಮಗಾರಿ ಮುಗಿದಿಲ್ಲ. ಈ ನಿತ್ಯ ಮಾರ್ಗದಲ್ಲಿ ಹೋಗುವ ವಾಹನ ಸವಾರರು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಾರೆ.
ತಡೆಗೋಡೆ ನಿರ್ಮಾಣ ಕಾಮಗಾರಿಗೆ ಪಕ್ಕದ ಭೂ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಜಾಗದಲ್ಲಿ ತಡೆಗೋಡೆ ನಿರ್ಮಾಣವಾಗುತ್ತಿದ್ದು, ಸರ್ವೇ ನಡೆಸುವಂತೆ ಕೋರಿದ್ದರು. ಅದರಂತೆ ಲೋಕೋಪಯೋಗಿ ಇಲಾಖೆ ಸರ್ವೇ ನಡೆಸಿತು. ಆದರೆ ಸರ್ವೇ ಸಮರ್ಪಕವಾಗಿಲ್ಲ ಎಂದು ಮತ್ತೆ ಆಕ್ಷೇಪ ಎತ್ತಿದರು. ಆಗ ಮತ್ತೆ ಕಾಮಗಾರಿ ನಿಂತಿತು. ಮತ್ತೊಮ್ಮೆ ಸಮರ್ಪಕ ಸರ್ವೇ ನಡೆಸುವಂತೆ, ಅಲ್ಲಿಯ ವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಭೂ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಹೀಗಾಗಿ ಕಾಮಗಾರಿ ಮುಂದುವರಿಯಲೇ ಇಲ್ಲ.ಇಕ್ಕಟ್ಟಾದ ರಸ್ತೆ, ಅಪೂರ್ಣ ಕಾಮಗಾರಿಯಿಂದ ವಾಹನ ಸವಾರರು ಪರದಾಡುವಂತಾಗಿದೆ. ರೈತರ ಟ್ರ್ಯಾಕ್ಟರ್, ಇತರ ವಾಹನಗಳು ಉರುಳಿದ ಉದಾಹರಣೆಗಳಿವೆ.
ಸ್ಥಳೀಯ ಭೂಮಾಲೀಕರು ಕಾಮಗಾರಿಗೆ ತಡೆ ಮಾಡಿದ್ದು, ಸಮಸ್ಯೆ ಬಗೆಹರಿಸಿಕೊಡಿ ಎಂದು ಲೋಕೋಪಯೋಗಿ ಇಲಾಖೆಯವರು 2024 ಫೆ. 8 ಹಾಗೂ 2025 ಏ. 18ರಂದು, ಹೀಗೆ ಎರಡು ಬಾರಿ ತಡಸ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಆದರೂ ಈ ವರೆಗೂ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.ಸದ್ಯ ಈ ರಸ್ತೆಯಲ್ಲಿ ಒಂದು ವಾಹನ ಮಾತ್ರ ಸಂಚರಿಸುವಷ್ಟು ಜಾಗವಿದೆ. ಯಾವಾಗ ಉರುಳಿಬೀಳುತ್ತೋ ಎನ್ನುವ ಭಯ ಚಾಲಕರನ್ನು ಕಾಡುತ್ತಲೇ ಇರುತ್ತದೆ. ಇಂತಹ ಇಕ್ಕಟ್ಟಾದ ರಸ್ತೆಯಲ್ಲಿ ಕಾಮಗಾರಿ ನಡೆದಿದ್ದು, ಕಾಮಗಾರಿಗೆ ಬಳಸಿದ ಕಬ್ಬಿಣದ ಸರಳುಗಳು ರಸ್ತೆಗೆ ಚಾಚಿವೆ. ಕಾಮಗಾರಿಯಿಂದ ರಸ್ತೆ ಹಾಳಾಗಿದೆ. ಹೀಗಾಗಿ ತಡೆಗೋಡೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ರಸ್ತೆ ದುರಸ್ತಿ ಮಾಡಿಕೊಡಿ ಎಂದು ಸ್ಥಳೀಯ ಮುಖಂಡರಾದ ಪರಶುರಾಮ ಕಾಳಿ, ಅಷ್ಪಾಕ್‌ಅಲಿ ಮತ್ತೇಖಾನ, ಶಂಕರಗೌಡ ಬಿ. ಪಾಟೀಲ, ಡಿ.ಆರ್. ಬೊಮ್ಮನಹಳ್ಳಿ, ಬಿ.ಡಿ. ಬ್ಯಾಹಟ್ಟಿ, ರುದ್ರಪ್ಪ ಕಾಳಿ, ಎಚ್.ವೈ. ಈಟಿ, ಮಲ್ಲಿಕಾರ್ಜುನ ಅಗಸರ, ಲಕ್ಷ್ಮಣ ಸುಣಗಾರ ಇತರರು ಆಗ್ರಹಿಸಿದ್ದಾರೆ.
ಅಪೂರ್ಣ ಕಾಮಗಾರಿಯಿಂದಾಗಿ ಹೊಲ–ಗದ್ದೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗುತ್ತಿದೆ. ರಸ್ತೆಯೂ ಸಂಪೂರ್ಣ ಕೊರಕಲಾಗಿದೆ. ಆದ್ದರಿಂದ ಕಾಮಗಾರಿ ಪೂರ್ಣಗೊಳಿಸದಿದ್ದರೆ ಹುಬ್ಬಳ್ಳಿ ಹಾನಗಲ್ ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕುನ್ನೂರ ಗ್ರಾಪಂ ಸದಸ್ಯ ಡಿ.ಆರ್. ಬೊಮ್ಮನಳ್ಳಿ ಹೇಳಿದರು.ರಸ್ತೆಯಲ್ಲಿನ ತಗ್ಗು–ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಕಾಲುವೆ ಕಾಮಗಾರಿ ವಿಚಾರವಾಗಿ ರೈತರು ತಕರಾರು ಸಲ್ಲಿಸಿದ್ದರು. ಅದನ್ನು ಸರಿಪಡಿಸಲಾಗಿದೆ. ಕೆಲ ದಿನಗಳಲ್ಲೇ ಕೆಲಸ ಪ್ರಾರಂಭಿಸಲಾಗುತ್ತದೆ ಎಂದು ಶಿಗ್ಗಾಂವಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಬಸವರಾಜ ಡಿ.ಬಿ. ಹೇಳಿದರು.