ನರೇಗಾ ಅನುಷ್ಠಾನಕ್ಕೆ ಸಮಸ್ಯೆ: ಗ್ರಾಪಂ ಒಕ್ಕೂಟದಿಂದ ಜನಪ್ರತಿನಿಧಿಗಳ ಭೇಟಿ

| Published : May 17 2025, 01:29 AM IST

ಸಾರಾಂಶ

ರಾಜ್ಯ ಸರ್ಕಾರವು ೨೦೨೫-೨೬ನೇ ಸಾಲಿನಿಂದ ಅನ್ವಯವಾಗುವಂತೆ ನರೇಗಾ ಯೋಜನೆಯಲ್ಲಿ ಬದಲಾಣೆ ಮಾಡಿರುವುದರಿಂದ ಯೋಜನೆಯ ಪ್ರಗತಿ ಕಡಿಮೆಯಾಗಲಿದೆ.

ಶಿರಸಿ: ರಾಜ್ಯ ಸರ್ಕಾರವು ೨೦೨೫-೨೬ನೇ ಸಾಲಿನಿಂದ ಅನ್ವಯವಾಗುವಂತೆ ನರೇಗಾ ಯೋಜನೆಯಲ್ಲಿ ಬದಲಾಣೆ ಮಾಡಿರುವುದರಿಂದ ಯೋಜನೆಯ ಪ್ರಗತಿ ಕಡಿಮೆಯಾಗಲಿದ್ದು, ಇದರಿಂದ ಅರ್ಹ ರೈತರಿಗೆ ಅನ್ಯಾಯವಾಗಲಿದೆ. ಮೊದಲಿನ ರೀತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿ, ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದಿಂದ ಸಂಸದ, ಶಾಸಕ, ತಾಪಂ ಇಒಗೆ ಮನವಿ ಸಲ್ಲಿಸಲಾಯಿತು.ಕ್ರಿಯಾ ಯೋಜನೆಯನ್ನು ಎಂಡ್೨ಎಂಡ್ ತಂತ್ರಾಂಶದಲ್ಲಿ ತಯಾರಿಸಿ, ಆನ್‌ಲೈನ್‌ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುಮೋದನೆ ಪಡೆಯಲಾಗುತ್ತಿದ್ದು, ಎಂಡ್೨ಎಂಡ್ ತಂತ್ರಾಂಶದಲ್ಲಿ ಮಂಜೂರಾದ ಕಾಮಗಾರಿಗಳನ್ನು ಮಾತ್ರ ಅನುಷ್ಠಾನಗೊಳಿಸಲು ಅವಕಾಶವಿದೆ. ಹಿಂದಿನ ವರ್ಷ ಮಂಜೂರಾದ ಕಾಮಗಾರಿಗಳನ್ನು ಅನುಷ್ಠಾನಕ್ಕೆ ಅವಕಾಶವಿಲ್ಲ. ಎಂಡ್೨ಎಂಡ್ ತಂತ್ರಾಂಶದಲ್ಲಿ ಗ್ರಾಮ ಪಂಚಾಯತವಾರು ಇಂತಿಷ್ಟೆ ಮೊತ್ತಕ್ಕೆ ಕ್ರಿಯಾಯೋಜನೆ ತಯಾರಿಸಬೇಕೆಂಬ ನಿರ್ಬಂಧ ಇರುವುದರಿಂದ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಸ್ವೀಕರಿಸಲಾದ ಎಲ್ಲ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅನೇಕ ರೈತರ ಕಾಮಗಾರಿಗಳು ಕ್ರಿಯಾ ಯೋಜನೆಯಿಂದ ಕೈಬಿಟ್ಟು ಹೋಗಿ ಅನೇಕ ಅರ್ಹ ರೈತರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ ನರೇಗಾ ಯೋಜನೆಯಡಿ ಸಮುದಾಯದ ಕಾಮಗಾರಿಗಳಾದ ಸಾರ್ವಜನಿಕ ಕುಡಿಯುವ ನೀರಿನ ಬಾವಿ ನಿರ್ಮಾಣ, ಅಂಗನವಾಡಿ ಕೇಂದ್ರಗಳ ನಿರ್ಮಾಣ, ಗ್ರಾಪಂ ಕಟ್ಟಡ ನಿರ್ಮಾಣ, ಸಂಜೀವಿನಿ ಶೆಡ್, ಸಮುದಾಯ ಶೌಚಾಲಯ, ಚೆಕ್ ಡ್ಯಾಂ, ಕಿಂಡಿ ಆಣೆಕಟ್ಟು, ಪ್ರವಾಹ ನಿಯಂತ್ರಣ ತಡೆಗೋಡೆಗಳ ನಿರ್ಮಾಣ, ಶಾಲಾ ಆಟದ ಮೈದಾನ ಅಭಿವೃದ್ಧಿ, ಶಾಲಾ ಕಂಪೌಂಡ್, ಶೌಚಲಯ ಸೇರಿದಂತೆ ಇದುವರೆಗೂ ಕೋಟ್ಯಂತರ ದೀರ್ಘಕಾಲಿಕ ಬಾಳಿಕೆ ಬರುವ ಆಸ್ತಿಗಳನ್ನು ಸೃಜನೆ ಮಾಡಲಾಗಿದೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ೨೦೨೫ರ ಪೂರ್ವದಲ್ಲಿರುವ ರೀತಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಲಾಯಿತು.

ಮನವಿ ಸ್ವೀಕರಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ನೆರವಿನಿಂದ ಗ್ರಾಪಂಗಳು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿದೆ. ಅನೇಕ ತೊಂದರೆಗಳು ರಾಜ್ಯ ಸರ್ಕಾರದಿಂದ ಆಗಿದೆ ಎಂಬುದನ್ನು ಸದಸ್ಯರು ಗಮನಕ್ಕೆ ತಂದಿದ್ದಾರೆ. ರಾಜ್ಯ ಸರ್ಕಾರದ ಸಚಿವರಲ್ಲಿ, ಸಂಬಂಧಪಟ್ಟ ಉನ್ನುತ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆಗಬೇಕಾಗಿರುವ ಅಪೇಕ್ಷಿತ ಕಾರ್ಯ ಮಾಡಿಕೊಡಲು ಕೇಂದ್ರದ ಮೇಲೆ ಒತ್ತಡ ಹೇರುತ್ತೇನೆ. ನರೇಗಾ ಯೋಜನೆ ಅನುಷ್ಠಾನಕ್ಕೆ ಸರಳೀಕರಣ ಮಾಡಿ ರಾಜ್ಯ ಸರ್ಕಾರ ಜವಾಬ್ದಾರಿಯುತವಾಗಿ ಸ್ಪಂದಿಸಿ, ಪರಿಹಾರ ದೊರಕಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.

ಶಿರಸಿ ತಾಲೂಕಿನ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವೀಶ ಹೆಗಡೆ, ಸದಸ್ಯರಾದ ನಾರಾಯಣ ಹೆಗಡೆ ಇದ್ದರು.