ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಶಿಕ್ಷಣವು ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ನೀಡುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತುಮಕೂರಿನ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.ಸಂಪಂಗಿರಾಮ ನಗರದ ಕರ್ನಾಟಕ ದೇವಾಂಗ ನೌಕರರ ಸಂಘದಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಶಿಕ್ಷಣ ನೀಡುತ್ತದೆ. ಶಿಕ್ಷಣವು ಅತ್ಯಂತ ಮಹತ್ವದ್ದಾಗಿದೆ. ಪೋಷಕರು, ಗುರು-ಹಿರಿಯರಿಗೆ ಮಕ್ಕಳು ಗೌರವ ಸಲ್ಲಿಸಬೇಕು. ಸ್ವಪ್ರಯತ್ನ, ಆತ್ಮವಿಶ್ವಾಸದಲ್ಲಿ ನಂಬಿಕೆ ಇಟ್ಟು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಸಂಪಾದಿಸುವುದಕ್ಕಿಂತ ಅವರಿಗೆ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ಡಾ। ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಮತ್ತಿತರ ಮಹನೀಯರು ತಮ್ಮ ಜ್ಞಾನದಿಂದ ಹೆಸರಾಗಿದ್ದಾರೆಯೇ ಹೊರತು ಜಾತಿಯಿಂದ ಅಲ್ಲ ಎಂಬುದನ್ನು ಮನಗಾಣಬೇಕು. ಶಿಕ್ಷಣಕ್ಕೆ ಬಹಳಷ್ಟು ಮಹತ್ವವಿದ್ದು, ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿರಿ ಎಂದು ಪೋಷಕರಿಗೆ ತಿಳಿಸಿದರು.
ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತಾಗ ಕುಗ್ಗಬಾರದು, ಗೆದ್ದಾಗ ಹಿಗ್ಗಬಾರದು. ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಬೇಕು. ಅಪಮಾನದ ಹಿಂದೆ ಸನ್ಮಾನವಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಉಮಾಶ್ರೀ, ಸಮಾಜ ಸೇವಕರಾದ ವಸುಂಧರ, ಡಾ। ಬಿ.ಪಿ.ಸನಾತನ ಮೂರ್ತಿ, ಅರಣ್ಯ ಇಲಾಖೆಯ ಅಧಿಕಾರಿ ಎಸ್.ನಾಗಭೂಷಣ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳಿಂದ ಚಿನ್ನದ ಪದಕ, ಡಾಕ್ಟರೆಟ್ ಪಡೆದವರನ್ನು ಗೌರವಿಸಲಾಯಿತು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಸಂಘದ ಅಧ್ಯಕ್ಷ ಕೆ.ಬಿ.ಭಾಸ್ಕರಯ್ಯ, ಮುಖಂಡರಾದ ರವೀಂದ್ರ ಪಿ.ಕಲಬುರಗಿ, ರಮೇಶ್, ಶ್ರೀನಿವಾಸ್, ಉಮಾಶಂಕರ್, ಗಿರಿಯಪ್ಪ ಉಪಸ್ಥಿತರಿದ್ದರು.