ಸಾರಾಂಶ
ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರ ಕೊರತೆಯಿದ್ದು, ಭರ್ತಿ ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಈಗಿರುವ ಶಿಕ್ಷಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ತರಗತಿಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಪ್ರಾಂಶುಪಾಲರಿಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರ ಕೊರತೆಯಿದ್ದು, ಭರ್ತಿ ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಈಗಿರುವ ಶಿಕ್ಷಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ತರಗತಿಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಪ್ರಾಂಶುಪಾಲರಿಗೆ ತಿಳಿಸಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರೀಯ ವಿದ್ಯಾಲಯದ ಪೋಷಕರ ಸಭೆ ಹಾಗೂ ಕೇಂದ್ರೀಯ ವಿದ್ಯಾಲಯದ ಕಟ್ಟಡ ಕಾಮಗಾರಿ ಸಭೆ ಕುರಿತು ಮಾತನಾಡಿದರು. ಕೇಂದ್ರೀಯ ವಿದ್ಯಾಲಯಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ ಹಾಗೂ ಇರುವ ಶಿಕ್ಷಕರು ಕೆಲಸಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ, ಸಂವಹನದಲ್ಲಿ ಭಾಷೆಯ ತೊಂದರೆ ಉಂಟಾಗುತ್ತಿದೆ ಎಂದು ಪೋಷಕರು ದೂರು ಸಲ್ಲಿಸಿದ್ದು, ಪ್ರಾಂಶುಪಾಲರು ತೊಂದರೆಗಳನ್ನು ಪರಿಹರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.ಮಕ್ಕಳಲ್ಲಿ ಯಾವುದೇ ಬೇಧ-ಬಾವ ಮಾಡಬಾರದು, ಭಾಷೆ ಕೊರತೆಯ ನೆಪ ಹೇಳದೆ ಮಕ್ಕಳಿಗೆ ಸರಿಯಾಗಿ ತರಗತಿಗಳನ್ನು ಮಾಡಬೇಕು. ಎಲ್ಲಾ ರೀತಿಯ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಬೇಕು ಪೋಷಕರ ಸಭೆ ನಡೆಸಿ ಮಕ್ಕಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜ್ ಮಾತನಾಡಿ, ಆಯಾ ವಿಷಯಗಳಿಗೆ ಸಂಬಂಧಿಸಿದ ಶಿಕ್ಷಕರನ್ನು ಸದ್ಯದಲ್ಲಿ ನೇಮಕ ಮಾಡಲಾಗುವುದು. ಕಟ್ಟಡ ಕಾಮಗಾರಿ ಕೆಲಸವು ಅಂತಿಮ ಹಂತದಲ್ಲಿದ್ದು, ಇದರ ಬಗ್ಗೆ ಪೋಷಕರಿಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು.
ಈಗಾಗಲೇ ಶಿಕ್ಷಕರ ಸಂದರ್ಶನ ನಡೆಯುತ್ತಿದ್ದು, ಆದಷ್ಟು ಬೇಗ ಶಿಕ್ಷಕರ ನೇಮಕಾತಿ ನಡೆಸಲಾಗುವುದು ಎಂದು ಹೇಳಿದರು. ಮಕ್ಕಳಿಗೆ ಆರ್ಥವಾಗುವ ರೀತಿಯಲ್ಲಿ ಪಾಠಗಳು ನಡೆಯಬೇಕು. ಗಣಿತ ಹಾಗೂ ಹಿಂದಿ ವಿಷಯಗಳಲ್ಲಿ ಸ್ವಲ್ಪ ನಿಗಾ ವಹಿಸಿ ತರಗತಿಗಳನ್ನು ಮಾಡಿ ಉಳಿದ ವಿಷಯಗಳಂತೆ ಈ ವಿಷಯಗಳು ಸುಲಭವಲ್ಲ. ಆದ್ದರಿಂದ ತರಗತಿಗಳನ್ನು ಸರಿಯಾಗಿ ನಡೆಸಿ ಮತ್ತೊಮ್ಮೆ ಪೋಷಕರಿಂದ ಯಾವುದೇ ದೂರುಗಳು ಬರಬಾರದು ಎಂದು ತಿಳಿಸಿದರು.ಸಭೆಯಲ್ಲಿ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಭರತ್ ಲಾಲ್ ಮೀನಾ, ಮುಖಂಡರಾದ ಪ್ರೊ.ಬಿ.ಜಯಪ್ರಕಾಶ್ ಗೌಡ, ಕೀಲಾರಕೃಷ್ಣ ಹಾಗೂ ಮತ್ತಿತರರಿದ್ದರು.