ಸಾರಾಂಶ
ಚನ್ನಗಿರಿ ಪಟ್ಟಣದಲ್ಲಿ ಪ್ರವಾದಿ ಮಹಮ್ಮದ್ ಅವರ 1500ನೇ ವರ್ಷದ ಜನ್ಮದಿನ ಅಂಗವಾಗಿ (ಈದ್ ಮಿಲಾದ್) ಗುರುವಾರ ಮುಸ್ಲಿಂ ಬಾಂಧವರಿಂದ ಬೃಹತ್ ಮೆರವಣಿಗೆ ನಡೆಯಿತು.
- ಗಮನ ಸೆಳೆದ ಹಸಿರು ಬಟ್ಟೆಗಳ ಅಲಂಕಾರ, ಮುಸ್ಲಿಂ ದೊರೆಗಳ ಭಾವಚಿತ್ರಗಳು
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದಲ್ಲಿ ಪ್ರವಾದಿ ಮಹಮ್ಮದ್ ಅವರ 1500ನೇ ವರ್ಷದ ಜನ್ಮದಿನ ಅಂಗವಾಗಿ (ಈದ್ ಮಿಲಾದ್) ಗುರುವಾರ ಮುಸ್ಲಿಂ ಬಾಂಧವರಿಂದ ಬೃಹತ್ ಮೆರವಣಿಗೆ ನಡೆಯಿತು. ಈದ್ ಮಿಲಾದ್ ಮೆರವಣಿಗೆಗೆ ಪಟ್ಟಣದ ತರಳಬಾಳು ವೃತ್ತದಿಂದ ಪಟ್ಟಣದ ಮೇಲಿನ ಬಸ್ ನಿಲ್ದಾಣದವರೆಗೆ ಹಸಿರು ಬಟ್ಟೆಗಳನ್ನು ವಿದ್ಯುತ್ ಕಂಬಗಳಿಗೆ ಸುತ್ತಿ, ಲೈಟಿಂಗ್‌ಗಳಿಂದ ಸಿಂಗರಿಸಲಾಗಿತ್ತು. ಕೋಟೆ ವೃತ್ತದಲ್ಲಿ ಮುಸ್ಲಿಂ ಧರ್ಮದ ಸಾರವನ್ನು ಸಾರುವ ಆಕೃತಿಗಳು ಎಲ್ಲರ ಗಮನ ಸೆಳೆಯುವಂತಿತ್ತು.ಪಟ್ಟಣದ ಅಯಾಕಟ್ಟಿನ ಸ್ಥಳಗಳಲ್ಲಿ ಟಿಪ್ಪು ಸುಲ್ತಾನ್, ಅಫ್ಜಲ್ ಖಾನ್, ಔರಂಗಜೇಬ್, ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಇನ್ನು ಅನೇಕ ಮುಸ್ಲಿಂ ದೊರೆಗಳ ಭಾವಚಿತ್ರಗಳು ಗಮನ ಸೆಳೆದವು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಮುಸ್ಲಿಂ ಯುವಕರು ಕೈಯಲ್ಲಿ ಹಸಿರು ಬಣ್ಣದ ಬಾವುಟಗಳನ್ನು ಹಿಡಿದು ಸಂಚರಿಸುತ್ತ ಮಹಮದ್ ಪೈಗಂಬರ್ ಅವರ ಕೀರ್ತನೆಗಳನ್ನು ಧ್ವನಿವರ್ಧಕ ಮೂಲಕ ಹಾಡುತ್ತಾ ಸಾಗಿದರು.ಮೆರವಣಿಗೆಯು ಪಟ್ಟಣದ ಹಜರತ್ ಮೊಹಬತ್ ಷಾ ಖಾದ್ರಿ ದರ್ಗಾದಿಂದ ಪ್ರಾರಂಭಗೊಂಡು ಕೋಟೆ ವೃತ್ತ, ಲಷ್ಕರ್ ಮೊಹಲ್ಲಾ, ತರಳಬಾಳು ವೃತ್ತ, ಮಾರುತಿ ಸರ್ಕಲ್, ಮುಖಾಂತರ ಮೇಲಿನ ಬಸ್ ನಿಲ್ದಾಣ ತಲುಪಿತು. ಅನಂತರ ಸ್ವಾಮಿ ವಿವೇಕಾನಂದ ರಸ್ತೆಯ ಮೂಲಕ ಪೇಟೆ ಬೀದಿಯ ದರ್ಗಾದ ಬಳಿ ಬಂದು ಮೆರವಣಿಗೆ ಮುಕ್ತಾಯಗೊಂಡಿತು.
ಮೆರವಣಿಗೆ ಪ್ರಾರಂಭಕ್ಕೂ ಮುನ್ನ ನೂರಾರು ಸಂಖ್ಯೆಯ ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮೆರವಣಿಗೆ ನಡೆಸಿದರು.- - -
-18ಕೆಸಿಎನ್‌ಜಿ1.ಜೆಪಿಜಿ: ಚನ್ನಗಿರಿ ಪಟ್ಟಣದಲ್ಲಿ ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು.-18ಕೆಸಿಎನ್‌ಜಿ2: ಚನ್ನಗಿರಿಯಲ್ಲಿ ಈದ್ ಮಿಲಾದ್ ಹಬ್ಬ ಅಂಗವಾಗಿ ಮೆರವಣಿಗೂ ಮುನ್ನ ಮುಸ್ಲಿಮರು ಬೈಕ್ ರ್ಯಾಲಿ ನಡೆಸಿದರು.