ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಜನಮನ ಸೆಳೆದ ಕಲಾತಂಡಗಳು

| Published : Mar 28 2025, 12:31 AM IST

ಸಾರಾಂಶ

ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಧಾರವಾಡದ ಶಂಕ್ರಪ್ಪ ಎಂ. ತಂಡದಿಂದ ಜಗ್ಗಲಗಿ, ದಾವಣಗೆರೆಯ ದೇವಿಬಾಯಿ ತಂಡದಿಂದ ಲಂಬಾಣಿ ನೃತ್ಯ, ಚಿತ್ರದುರ್ಗದ ಅಶೋಕ ತಂಡದಿಂದ ಡೊಳ್ಳು ಕುಣಿತ ಜನಮನ ಸೆಳೆಯಿತು.

ಗಂಗಾವತಿ:

13ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಅವರ ಭವ್ಯ ಮೆರವಣಿಗೆ ಜರುಗಿತು. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಪ್ರಾರಂಭಗೊಂಡ ಮೆರವಣಿಗೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.

ಜನಮನ ಸಳೆದ ಕಲಾತಂಡಗಳು:

ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಧಾರವಾಡದ ಶಂಕ್ರಪ್ಪ ಎಂ. ತಂಡದಿಂದ ಜಗ್ಗಲಗಿ, ದಾವಣಗೆರೆಯ ದೇವಿಬಾಯಿ ತಂಡದಿಂದ ಲಂಬಾಣಿ ನೃತ್ಯ, ಚಿತ್ರದುರ್ಗದ ಅಶೋಕ ತಂಡದಿಂದ ಡೊಳ್ಳು ಕುಣಿತ, ಯಾದಗಿರಿಯ ಪರಶುರಾಮ ತಂಡದಿಂದ ಗಾರುಡಿಗೊಂಬೆ, ರಾಯಚೂರು ಶಿವರಾಜ ತಂಡದಿಂದ ಕೊಂಬು ಕಹಳೆ, ತುಮಕೂರಿನ ತಿಪ್ಪೇಸ್ವಾಮಿ ತಂಡದಿಂದ ಕೋಳಿ ಮತ್ತು ನವಿಲು ನೃತ್ಯ, ನಂದಿಕುಣಿತ, ಚಿತ್ರದುರ್ಗ ಶ್ರೀನಿವಾಸ ತಂಡದಿಂದ ಸಮಾಳವಾದನ, ಕೊಪ್ಪಳದ ರೇಖಾ ಇಟಗಿ ತಂಡದಿಂದ ನಂದಿ ಕುಣಿತ, ಕೊಪ್ಪಳದ ಸಂದೀಪ್ ಭಜಂತ್ರಿ ತಂಡದಿಂದ ಕರಡಿ ಮಜಲು, ಮಹಿಳಾ ಡೊಳ್ಳು ಕುಣಿತ ಹಾಗೂ ಶ್ರೀರಾಮನಗರ ಮತ್ತು ಗಂಗಾವತಿಯ ಹರೇ ಶ್ರೀನಿವಾಸ ಭಜನಾ ಮಂಡಳಿಯ ಕೋಲಾಟ ಗಮನ ಸೆಳೆಯಿತು.

ನಗರಸಭೆ ಅಧ್ಯಕ್ಷ ಮೌಲಾಸಾಬ, ಉಪಾಧ್ಯಕ್ಷೆ ಪಾರ್ವತಮ್ಮ ದುರುಗೇಶ ದೊಡ್ಡಮನಿ, ಮುಖಂಡ ಜಿ. ಶ್ರೀಧರ, ಮನೋಹರಗೌಡ ರಮೇಶ ಚೌಡ್ಕಿ, ಕಸಾಪ ಜಿಲ್ಲಾದ್ಯಕ್ಷ ಶರಣೇಗೌಡ, ತಾಲೂಕು ಅಧ್ಯಕ್ಷ ರುದ್ರೇಶ ಮಡಿವಾಳ, ರಮೇಶ ಕುಲಕರ್ಣಿ ಭಾಗವಹಿಸಿದ್ದರು.