ರಾಜಬೀದಿ ಮಾರ್ಗದಲ್ಲಿ ಗಣಪತಿ ಮೂರ್ತಿ ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ ಪರಿಣಾಮ, ಸ್ವಲ್ಪ ದೂರ ಮುಂದುವರಿದಿದ್ದ ಮೆರವಣಿಗೆ ಪೊಲೀಸ್ ಅಧಿಕಾರಿಗಳ ಕಠಿಣ ನಿಲುವಿನಿಂದಾಗಿ ಪುನಃ ಮೂಲ ಸ್ಥಳಕ್ಕೆ ಹಿಂದಿರುಗಿ ಪ್ರತಿಷ್ಠಾಪನೆಗೊಂಡ ಘಟನೆ ಭಾನುವಾರ ರಾತ್ರಿ ಪಟ್ಟಣದಲ್ಲಿ ನಡೆಯಿತು.

ಸವಣೂರು: ರಾಜಬೀದಿ ಮಾರ್ಗದಲ್ಲಿ ಗಣಪತಿ ಮೂರ್ತಿ ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ ಪರಿಣಾಮ, ಸ್ವಲ್ಪ ದೂರ ಮುಂದುವರಿದಿದ್ದ ಮೆರವಣಿಗೆ ಪೊಲೀಸ್ ಅಧಿಕಾರಿಗಳ ಕಠಿಣ ನಿಲುವಿನಿಂದಾಗಿ ಪುನಃ ಮೂಲ ಸ್ಥಳಕ್ಕೆ ಹಿಂದಿರುಗಿ ಪ್ರತಿಷ್ಠಾಪನೆಗೊಂಡ ಘಟನೆ ಭಾನುವಾರ ರಾತ್ರಿ ಪಟ್ಟಣದಲ್ಲಿ ನಡೆಯಿತು.

ಸಿಂಪಿ ಗಲ್ಲಿ, ಗಣಪತಿ ದೇಗುಲದಲ್ಲಿ ಮೂವತ್ತೊಂಬತ್ತನೆಯ ವರ್ಷದ ಪ್ರತಿಷ್ಠಾಪನೆಗೊಂಡಿದ್ದ ಮೂರ್ತಿಯ ವಿಸರ್ಜನಾ ಮೆರವಣಿಗೆಯನ್ನು ಗಣೇಶೋತ್ಸವ ಆಚರಣಾ ಸಮಿತಿ ಹಲವು ಜನಪದ ಕಲಾ ತಂಡಗಳ ಸಹಭಾಗಿತ್ವದೊಂದಿಗೆ ಏರ್ಪಡಿಸಿತ್ತು. ಮೆರವಣಿಗೆಯ ಮಾರ್ಗ ಮತ್ತು ದಿನಾಂಕವನ್ನು ಪಟ್ಟಣದ ಎಲ್ಲ ಗಣೇಶೋತ್ಸವ ಸಮಿತಿಗಳ ಪ್ರತಿನಿಧಿಗಳ ಸಭೆಯಲ್ಲಿ ಮೊದಲೇ ಖಚಿತಪಡಿಸಲಾಗಿತ್ತು.

ಡಿಜೆ ಬಳಕೆಗೆ ಪೊಲೀಸ್ ಇಲಾಖೆ ಒಪ್ಪಿಗೆ ನೀಡದ ಕಾರಣ, ಭಕ್ತಾದಿಗಳು ಶಾಂತಿಯುತವಾಗಿ, ಸರಳ ರೀತಿಯಲ್ಲಿ ಭಕ್ತಿಪೂರ್ವಕ ಮೆರವಣಿಗೆಯನ್ನು ರಾಜಬೀದಿಯ ಮೂಲಕ ಆರಂಭಿಸಿದ್ದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪೊಲೀಸ್ ಸಿಬ್ಬಂದಿ, ಆ ಮಾರ್ಗದಲ್ಲಿ ಲಾಲಶಾಕಟ್ಟೆ ಮಸೀದಿ ಇರುವುದರಿಂದ ಮೆರವಣಿಗೆ ಸಾಗಲು ಅವಕಾಶವಿಲ್ಲ ಎಂದು ತಡೆ ಹಾಕಿದರು.

ಇದರಿಂದ ಕೆರಳಿದ ಭಕ್ತರು, ತಡೆ ಒಡ್ಡಿದ ಸ್ಥಳದಲ್ಲಿಯೇ ಮೂರ್ತಿಯೊಂದಿಗೆ ಭಜನೆ ಆರಂಭಿಸಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹಾಗೂ ತಂಡ, ಸಮಿತಿ ಪದಾಧಿಕಾರಿಗಳೊಂದಿಗೆ ಸಂಧಾನ ನಡೆಸಿದರೂ ಒಮ್ಮತ ಮೂಡಲಿಲ್ಲ. ರಾಜಬೀದಿಯಲ್ಲೇ ಮೆರವಣಿಗೆ ಸಾಗಬೇಕೆಂಬ ಬೇಡಿಕೆಗೆ ಸಮಿತಿ ಸದಸ್ಯರು ಅಂಟಿಕೊಂಡರು.ಅಧಿಕಾರಿಗಳ ಬಿಗಿ ನಿಲುವಿನಿಂದ ರೋಸಿಹೋದ ಭಕ್ತರು, ಸಮಿತಿಯೊಂದಿಗೆ ಚರ್ಚಿಸಿ, ವಾಗ್ವಾದಕ್ಕೆ ಇಳಿಯುವ ಬದಲು ಮೂರ್ತಿಯನ್ನು ಮರಳಿ ಮೂಲ ಸ್ಥಳದಲ್ಲಿ ಸ್ಥಾಪಿಸಿ ಮುಂದಿನ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಂದರು. ಮೂರ್ತಿಯನ್ನು ಮರುಸ್ಥಾಪಿಸಲು ಮುಂದಾದಾಗಲೂ ಪೊಲೀಸರ ನಿಲುವು ಬದಲಾಗದಿರುವುದನ್ನು ಕಂಡು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು ಐದುನೂರು ಮೀಟರ್ ದೂರ ಸಾಗಿದ್ದ ಮೂರ್ತಿಯನ್ನು ಸಮಿತಿ ಸದಸ್ಯರು ಮತ್ತೆ ದೇಗುಲಕ್ಕೆ ಕೊಂಡೊಯ್ದು ಪುನಃ ಪ್ರತಿಷ್ಠಾಪಿಸಿದರು.ಈ ವೇಳೆ ಅರುಣ ಬಗರೆ, ಮಹೇಶ ಸಾಲಿಮಠ, ಗಂಗಾಧರ ಬಾಣದ, ಪಾಂಡುರಂಗ ಮಹೇಂದ್ರಕರ, ಜಯತೀರ್ಥ ದೇಶಪಾಂಡೆ, ಮಹೇಶ ಮುದಗಲ್, ಶ್ರೀನಿವಾಸ ಗಿತ್ತೆ, ಗಜಾನನ ರಾಶಿನಕರ, ಪ್ರವೀಣ ಬಾಲೇಹೊಸೂರ, ವಿನಾಯಕ ಕುಲಕರ್ಣಿ, ಸಮೀತ ಕೆಮ್ಮಣಕೇರಿ, ಮಹೇಶ ಜಡಿ, ಶಂಕರ ಪಾಟೀಲ, ಗಿರೀಶ ಬಗರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಎಸ್‌ಪಿ ಸೇರಿ ಯಾವುದೇ ಅಧಿಕಾರಿ ಸ್ಪಂದಿಸಲಿಲ್ಲ.

ಹಲವು ವರ್ಷಗಳಿಂದ ಸವಣೂರಿನಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ಗಣೇಶೋತ್ಸವ ಆಚರಿಸಲಾಗುತ್ತಿದೆ ಎಂದೂ, ಮುಸ್ಲಿಂ ಸಮುದಾಯ ಮೆರವಣಿಗೆಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದೂ ಸಂಘಟಕರು ತಿಳಿಸಿದರು. ಈ ಕುರಿತು ಪೊಲೀಸ್ ಅಧಿಕಾರಿಗಳ ಎದುರೇ ಮುಸ್ಲಿಂ ಬಾಂಧವರಿಂದ ಸ್ಪಷ್ಟನೆಯನ್ನೂ ಕೊಡಿಸಲಾಗಿತ್ತು ಎಂದು ಸಂಘಟಕರು ಹೇಳಿದರು. ಪೊಲೀಸರ ಈ ನಿಲುವಿನಿಂದ ಹಬ್ಬದ ಸಂಭ್ರಮ ಹಾಗೂ ಸೌಹಾರ್ದ ವಾತಾವರಣಕ್ಕೆ ಧಕ್ಕೆಯಾಯಿತು ಎಂಬ ಅಭಿಪ್ರಾಯವನ್ನು ಸಂಘಟಕರು ವ್ಯಕ್ತಪಡಿಸಿದರು.