ಸಾರಾಂಶ
ಯಲ್ಲಾಪುರ: ಜಗತ್ತಿನಲ್ಲಿ ನಮಗೆ ಬೇರೆ ಯಾವ ದೇಶವೂ ಇಲ್ಲ. ಅಂತೆಯ ಇಸ್ರೇಲಿಗೂ ಕೂಡ ಅನ್ನುವುದನ್ನು ಈ ದೇಶದ ಸಮಸ್ತ ಹಿಂದೂಗಳು ಅರ್ಥಮಾಡಿಕೊಳ್ಳಬೇಕು. ಆದರೆ, ದೇಶವನ್ನಾಳುವ ಕೆಲವು ಸರ್ಕಾರಗಳು ಸಾವಿರಾರು ಕೋಟಿ ಮುಸ್ಲಿಮರಿಗೆ ನೀಡುತ್ತೇವೆಂದು ಘೋಷಿಸುತ್ತವೆ. ಇದು ಸಮಾನತೆಯೇ? ಎನ್ನುವುದನ್ನು ಹಿಂದೂಗಳಾದ ನಾವು ಅರ್ಥಮಾಡಿಕೊಳ್ಳಬೇಕು ಎಂದು ಬಂಟ್ವಾಳದ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ಡಾ. ಪ್ರಭಾಕರ ಭಟ್ಟ ಕಲ್ಲಡ್ಕ ಹೇಳಿದರು.
ಶನಿವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ವಿಶ್ವದರ್ಶನ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.ಸನಾತನ ಧರ್ಮ, ಸಂಸ್ಕೃತಿಯ ಉಳಿವಿಗೆ ತಾಯಂದಿರು ಚಿಂತನೆ ನಡೆಸಬೇಕು. ಧರ್ಮಪ್ರಜ್ಞೆ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕು. ನಮ್ಮ ಜೀವನಕ್ಕೆ ಆಧಾರವಾದವರಿಗೆ ಮಾತೃಸ್ಥಾನ ನೀಡಿದ ಸಂಸ್ಕೃತಿ ನಮ್ಮದು. ಭಾರತ ಎಲ್ಲ ಹಂತದಲ್ಲಿಯೂ ಸರ್ವಶ್ರೇಷ್ಠ ದೇಶ. ಅದರ ಮಹತ್ವ ಅರಿಯದೇ ನಾವು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಮೂಲಕ ನಮ್ಮತನ ಕಳೆದುಕೊಳ್ಳುತ್ತ ಕುಬ್ಜರಾಗುತ್ತಿರುವುದು ಆತಂಕದ ವಿಷಯ. ನಮ್ಮ ದೇಶದಲ್ಲಿ ಎಲ್ಲ ರಾಷ್ಟ್ರವನ್ನು ಮೀರುವಂತಹ ವಿಜ್ಞಾನಿಗಳಿದ್ದಾರೆ. ಆದರೆ, ಕೆಲವು ರಾಷ್ಟ್ರಗಳು ನಮ್ಮನ್ನು ಹತ್ತಿಕ್ಕುತ್ತಿವೆ. ಅವರೆಲ್ಲರಿಗೂ ಸಡ್ಡು ಹೊಡೆದು ನಿಲ್ಲಬೇಕಾಗಿದೆ. ಆ ದೃಷ್ಟಿಯಿಂದ ಮೋದಿ ಅವರು ಆ ಕಾರ್ಯ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯಾಗಿದೆ ಎಂದರು.
ಸಂಸ್ಕೃತ ಅಧ್ಯಾಪಕಿ, ವಿಧಾನಪರಿಷತ್ ಮಾಜಿ ಸದಸ್ಯೆ ಡಾ. ಎಸ್.ಆರ್. ಲೀಲಾ ಹಾಗೂ ನಾಟಿ ವೈದ್ಯ ಹನುಮಂತ ಗೌಡ ಬೆಳ್ಳಂಬರ ಅವರಿಗೆ ಈ ಬಾರಿಯ ವಿಶ್ವದರ್ಶನ ಪುರಸ್ಕಾರ ನೀಡಿ ಗೌರವಿಸಲಾಯಿತು.ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ. ಎಸ್.ಆರ್. ಲೀಲಾ, ಆತ್ಮನಿರ್ಭರತೆಯ ಶಿಕ್ಷಣ ನೀಡಲು ವಿಶ್ವದರ್ಶನ ಸಂಸ್ಥೆ ಮುಂದಾಗಿರುವುದು ಸಂತಸದ ಸಂಗತಿ. ಎಲ್ಲ ಭಾಷೆಗಳಿಗೆ ಸಮಾನ ಮಹತ್ವ ನೀಡುವ ಸಂಸ್ಥೆಯ ಆಶಯ ಮಾದರಿಯಾಗಿದೆ. ಸಂಸ್ಕೃತ ಕೇವಲ ಭಾಷೆಯಲ್ಲ. ಅದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಸತ್ವವಾಗಿದೆ. ಮಕ್ಕಳಿಗೆ ಸಂಸ್ಕೃತ ಶಿಕ್ಷಣ ನೀಡುವುದು ವ್ಯಕ್ತಿತ್ವ ಬೆಳವಣಿಗೆ ಜ್ಞಾನಕ್ಕೋಸ್ಕರವೇ ಹೊರತು ಉದ್ಯೋಗಕ್ಕಾಗಿ ಅಲ್ಲ ಎಂದರು.
ಸಂಸ್ಥೆಯ ಅಧ್ಯಕ್ಷತೆ ವಹಿಸಿದ್ದ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಂಸ್ಥೆಯಲ್ಲಿ ಈ ವರ್ಷ ಬಿಸಿಎ ಮತ್ತು ಡಾ. ವಿಜಯ ಸಂಕೇಶ್ವರ ಹೆಸರಿನಲ್ಲಿ ಮೀಡಿಯಾ ಸ್ಕೂಲ್‌ನ್ನು ವಿಶ್ವದರ್ಶನ ಸಂಸ್ಥೆಯಲ್ಲಿ ಆರಂಭಿಸಲಾಗಿದೆ. ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೂ ಸಮಾನ ಪ್ರಾಧಾನ್ಯತೆ ನೀಡುತ್ತಿದ್ದೇವೆ ಎಂದರು.ಸಂಸ್ಥೆಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕ್ಷಿತಿಜ, ಬ್ಲೂಮ್, ವಿಶ್ವಪಥ, ದರ್ಶನ ಕೈಬರಹ ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆ ಬರುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ನೀಡಿ ಜಿಲ್ಲೆಯ ಯುವಕರಿಗೆ ಉದ್ಯೋಗಕ್ಕೆ ಅವಕಾಶ ಒದಗಿಸಬೇಕು ಎಂದರು.ಕುಮಟಾದ ಕೆನರಾ ಹೆಲ್ತ್ ಕೇರ್ ಮುಖ್ಯಸ್ಥ ಡಾ. ಜಿ.ಜಿ. ಹೆಗಡೆ ಮಾತನಾಡಿ, ಇಂದಿನ ಶಿಕ್ಷಣ ಭಯ ಹುಟ್ಟಿಸುವ ಚಿಂತನೆ ಕಲಿಸುತ್ತದೆಯೇ ವಿನಃ ಉತ್ತಮ ಸಮಾಜ ನಿರ್ಮಾಣಕ್ಕೆ ಜ್ಞಾನಿಯಾಗುವ ಶಿಕ್ಷಣ ಬೇಕು. ಡಿಗ್ರಿ ಬದುಕಿಗೆ ಪೂರಕವಲ್ಲ ಎಂದರು.
ಹೊನ್ನಾವರದ ಎಂಪಿಇ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಮಾತನಾಡಿ, ರಥಕ್ಕೆ ೪ ಚಕ್ರವಿದ್ದಂತೆ ನಮ್ಮ ಶಿಕ್ಷಣ ಸಂಸ್ಥೆ, ಪಾಲಕರು, ಶಿಕ್ಷಕರು, ಮಕ್ಕಳು ಸಮಾನ ಮನೋಭಾವದಿಂದ ಕೆಲಸ ಮಾಡಿದರೆ ಮಾತ್ರ ಉತ್ತಮ ಶಿಕ್ಷಣ ಸಾಧ್ಯ ಎಂದರು.ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಅಂಕೋಲಾದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ನಾಯಕ ಇನ್ನಿತರರು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವರದಿ ವಾಚಿಸಿದರು. ಪಿಯು ಕಾಲೇಜ್ ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ವಾದ್ಯಮೇಳ, ಕುದುರೆಯ ಜತೆಗೆ ಅತಿಥಿಗಳನ್ನು ವೇದಿಕೆಗೆ ತರಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಂಸ್ಥೆಯ ಗೌರವ ಕಾರ್ಯದರ್ಶಿ ನರಸಿಂಹ ಕೋಣೆಮನೆ ಸ್ವಾಗತಿಸಿ, ವಂದಿಸಿದರು.