ಸಾರಾಂಶ
ಮನೆಗಳಿಂದ ನಿತ್ಯ ಸಂಗ್ರಹಿಸುವ ಹಸಿ ತ್ಯಾಜ್ಯ, ಹಣ್ಣು- ತರಕಾರಿ, ಸೊಪ್ಪು ಮಾರಾಟಗಾರರು, ಮಾರುಕಟ್ಟೆಯಿಂದ ಹೊರಹಾಕಲ್ಪಡುವ ಹಸಿ ತ್ಯಾಜ್ಯ ಜೊತೆಗೆ ರಸ್ತೆಯಲ್ಲಿ ಬೀಡಾಡಿ ದನಗಳು ಹಾಕುವ ಸಗಣಿ ಸೇರಿ ನಿತ್ಯ ೬ ಟನ್ ಹಸಿ ತಾಜ್ಯವನ್ನು ಸಂಗ್ರಹಿಸಲಾಗುವುದು. ಅದೆಲ್ಲವನ್ನೂ ವಾಹನಗಳಲ್ಲಿ ತುಂಬಿಕೊಂಡು ಕಾಳೇನಹಳ್ಳಿಯಲ್ಲಿರುವ ಗೊಬ್ಬರ ತಯಾರಿಕಾ ಘಟಕದಲ್ಲಿ ತುಂಬಿಸಿ ಎಲ್ಲವನ್ನೂ ಮಿಶ್ರಣ ಮಾಡಲಾಗುತ್ತದೆ. ಆನಂತರ ನೀರನ್ನು ಮಿಶ್ರಣ ಮಾಡಿ ೪೫ ದಿನಗಳವರೆಗೆ ಕೊಳೆಯಲು ಬಿಡಲಾಗುವುದು. ನಿತ್ಯವೂ ಅದನ್ನು ಚೆನ್ನಾಗಿ ಮಿಶ್ರಣ ಮಾಡಲಾಗುತ್ತಿರುತ್ತದೆ.
ಎಚ್.ಕೆ.ಅಶ್ವಥ್ ಹಳುವಾಡಿ
ಕನ್ನಡಪ್ರಭ ವಾರ್ತೆ ಮಂಡ್ಯಮನೆಗಳು, ಮಾರುಕಟ್ಟೆ ಹಾಗೂ ಹಣ್ಣು- ತರಕಾರಿ ವ್ಯಾಪಾರಿಗಳಿಂದ ಸಂಗ್ರಹಿಸಲಾಗುವ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಮಾರಾಟ ಮಾಡುವಲ್ಲಿ ನಗರಸಭೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕಾಳೇನಹಳ್ಳಿಯಲ್ಲಿರುವ ಗೊಬ್ಬರ ತಯಾರಿಕಾ ಘಟಕದಲ್ಲಿ ಹಸಿ ತ್ಯಾಜ್ಯವನ್ನು ೪೫ ದಿನಗಳ ಕಾಲ ಚೆನ್ನಾಗಿ ಕೊಳೆಸಿ, ಒಣಗಿಸಿ ಅದನ್ನು ಪುಡಿ ಮಾಡಿ ೧೦ ಕೆಜಿ ಬ್ಯಾಗ್‌ಗಳಿಗೆ ತುಂಬಿ ಮಾರಾಟ ಮಾಡಲಾಗುತ್ತಿದೆ. ವಿ.ಸಿ.ಫಾರಂ ವಿಜ್ಞಾನಿಗಳು ಹೊಲ- ಗದ್ದೆ, ಮನೆ ತೋಟ, ಕೈತೋಟಗಳಲ್ಲಿ ಬಳಸಲು ಯೋಗ್ಯವೆಂದು ಅಧಿಕೃತ ಮುದ್ರೆಯನ್ನೂ ಒತ್ತಿದ್ದಾರೆ.ಗೊಬ್ಬರ ಬಳಕೆಗೆ ಯೋಗ್ಯವೆಂದು ವಿಜ್ಞಾನಿಗಳು ಗ್ರೀನ್‌ಸಿಗ್ನಲ್ ನೀಡಿದ ಬಳಿಕ ಪ್ರತಿ ಕೆಜಿಗೆ ೪ ರು.ನಂತೆ ಒಂದು ಬ್ಯಾಗ್‌ಗೆ ೪೦ ರು.ನಂತೆ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ. ದಿನೇ ದಿನೇ ಗೊಬ್ಬರಕ್ಕೆ ಬೇಡಿಕೆಯೂ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ಅವರು ಹಸಿ ತ್ಯಾಜ್ಯವನ್ನು ವ್ಯರ್ಥವಾಗಲು ಬಿಡದೆ ಮಾಡಿದ ಸತತ ಪ್ರಯತ್ನ ಹಾಗೂ ನೀಡಿದ ಮಾರ್ಗದರ್ಶನದಿಂದ ಹಸಿ ತ್ಯಾಜ್ಯವೀಗ ಬಳಕೆಗೆ ಯೋಗ್ಯವಾದ ಗೊಬ್ಬರವಾಗಿ ಪರಿವರ್ತನೆಗೊಂಡಿದೆ. ಈ ಕಾರ್ಯಕ್ಕೆ ಆರೋಗ್ಯ ನಿರೀಕ್ಷಕರಾದ ಚೆಲುವರಾಜು, ಮಂಜೇಶ್, ಮೂರ್ತಿ, ಅಶ್ವತ್ಥ್, ಶ್ರೀನಿವಾಸ್, ಸೂಪರ್‌ವೈಸರ್ ಅಭಿಲಾಶ್‌ಕುಮಾರ್ ಸಾಥ್ ನೀಡಿದ್ದಾರೆ. ಆ ಮೂಲಕ ನಗರಸಭೆ ಯಶೋಗಾಥೆಯನ್ನು ದಾಖಲಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.ನಿತ್ಯ ೬ ಟನ್ ಹಸಿ ತ್ಯಾಜ್ಯ:
ಮನೆಗಳಿಂದ ನಿತ್ಯ ಸಂಗ್ರಹಿಸುವ ಹಸಿ ತ್ಯಾಜ್ಯ, ಹಣ್ಣು- ತರಕಾರಿ, ಸೊಪ್ಪು ಮಾರಾಟಗಾರರು, ಮಾರುಕಟ್ಟೆಯಿಂದ ಹೊರಹಾಕಲ್ಪಡುವ ಹಸಿ ತ್ಯಾಜ್ಯ ಜೊತೆಗೆ ರಸ್ತೆಯಲ್ಲಿ ಬೀಡಾಡಿ ದನಗಳು ಹಾಕುವ ಸಗಣಿ ಸೇರಿ ನಿತ್ಯ ೬ ಟನ್ ಹಸಿ ತಾಜ್ಯವನ್ನು ಸಂಗ್ರಹಿಸಲಾಗುವುದು. ಅದೆಲ್ಲವನ್ನೂ ವಾಹನಗಳಲ್ಲಿ ತುಂಬಿಕೊಂಡು ಕಾಳೇನಹಳ್ಳಿಯಲ್ಲಿರುವ ಗೊಬ್ಬರ ತಯಾರಿಕಾ ಘಟಕದಲ್ಲಿ ತುಂಬಿಸಿ ಎಲ್ಲವನ್ನೂ ಮಿಶ್ರಣ ಮಾಡಲಾಗುತ್ತದೆ. ಆನಂತರ ನೀರನ್ನು ಮಿಶ್ರಣ ಮಾಡಿ ೪೫ ದಿನಗಳವರೆಗೆ ಕೊಳೆಯಲು ಬಿಡಲಾಗುವುದು. ನಿತ್ಯವೂ ಅದನ್ನು ಚೆನ್ನಾಗಿ ಮಿಶ್ರಣ ಮಾಡಲಾಗುತ್ತಿರುತ್ತದೆ.೪೦೦ ಟನ್ ಸಾಮರ್ಥ್ಯದ ಘಟಕ:
ಗೊಬ್ಬರ ತಯಾರಿಕಾ ಘಟಕದಲ್ಲಿ ೪೦೦ ಟನ್ ಹಿಡಿಸುವಷ್ಟು ಸಾಮರ್ಥ್ಯದ ಮೂರು ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಇದು ಮೂರು ಹಂತಗಳಲ್ಲಿ ಸಂಸ್ಕರಣೆಯಾಗುತ್ತಿರುತ್ತದೆ. ಮೊದಲನೇ ಹಂತದಲ್ಲಿ ಬಟ್ಟೆ, ಪ್ಲಾಸ್ಟಿಕ್ ಕವರ್, ಎರಡನೇ ಹಂತದಲ್ಲಿ ಸಣ್ಣ ಪ್ರಮಾಣದ ಪ್ಲಾಸ್ಟಿಕ್ ಕವರ್, ಮೂರನೇ ಹಂತದಲ್ಲಿ ಕಲ್ಲು- ಮಣ್ಣಿನ ಮಿಶ್ರಣವಾಗಿರುವುದನ್ನು ಬೇರ್ಪಡಿಸಲಾಗುತ್ತದೆ. ಆನಂತರ ಈ ಹಸಿ ಕಸವನ್ನು ಚೆನ್ನಾಗಿ ಒಣಗಿಸಲಾಗುವುದು. ಸಂಪೂರ್ಣ ಒಣಗಿದ ಬಳಿಕ ಅದನ್ನು ಯಂತ್ರದೊಳಗೆ ಹಾಕಿ ಪುಡಿ ಮಾಡಲಾಗುತ್ತದೆ. ಸಗಣಿ, ತರಕಾರಿ, ಹಣ್ಣುಗಳು, ಸೊಪ್ಪುಗಳೆಲ್ಲದರಿಂದ ಮಿಶ್ರಣಗೊಂಡ ಗೊಬ್ಬರ ತಯಾರಾಗಿ ೧೦ ಕೆಜಿ ಬ್ಯಾಗ್‌ಗಳನ್ನು ಸೇರಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.೧೨೭೦ ಕೆಜಿ ಮಾರಾಟ:
ಕಳೆದೊಂದು ತಿಂಗಳಿನಲ್ಲಿ ನಗರಸಭೆಯಿಂದ ೧೨೭೦ ಕೆಜಿ ಗೊಬ್ಬರ ಮಾರಾಟ ಮಾಡಲಾಗಿದೆ. ಹಸಿ ತ್ಯಾಜ್ಯದಿಂದ ತಯಾರಾಗಿರುವ ಗೊಬ್ಬರ ಸಾಕಷ್ಟು ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ನಗರದ ಜನರು ಸೇರಿದಂತೆ ಗ್ರಾಮೀಣ ರೈತರಿಂದಲೂ ಗೊಬ್ಬರಕ್ಕೆ ಬೇಡಿಕೆ ಇಡುತ್ತಿದ್ದಾರೆ. ನಗರದ ಜನರು ಕುಂಡಗಳಲ್ಲಿ ಬೆಳೆಯಬಹುದಾದ ಅಲಂಕಾರಿಕ ಗಿಡಗಳು, ಹೂಗಿಡಗಳು, ಮನೆಯ ಆವರಣದ ಕೈ ತೋಟ, ತಾರಸಿ ತೋಟಗಳಲ್ಲಿ ಬೆಳೆಯಬಹುದಾದ ಉತ್ಪನ್ನಗಳಿಗೆ ಬಳಕೆ ಮಾಡುತ್ತಿದ್ದರೆ, ರೈತರು ಬೆಳೆಯುವ ವಿವಿಧ ಬೆಳೆಗಳು ಹಾಗೂ ಗದ್ದೆಗಳಿಗೂ ಗೊಬ್ಬರವನ್ನು ಉಪಯೋಗಿಸುತ್ತಿದ್ದಾರೆ. ಗೊಬ್ಬರಕ್ಕೆ ಉತ್ತಮ ಬೇಡಿಕೆ ಸೃಷ್ಟಿಯಾಗಿದ್ದರೂ ಬೇಡಿಕೆಗೆ ತಕ್ಕಂತೆ ಗೊಬ್ಬರವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.ರಾಸಾಯನಿಕ ಮಿಶ್ರಣವಿಲ್ಲ:
ಹಸಿ ತ್ಯಾಜ್ಯದಿಂದ ತಯಾರಿಸುವ ಗೊಬ್ಬರವನ್ನು ೪೫ ದಿನಗಳ ಕಾಲ ಕೊಳೆಸುವುದು, ಅದನ್ನು ಮೂರು ಹಂತಗಳಲ್ಲಿ ಸಂಸ್ಕರಿಸಿ ಆನಂತರ ಅದನ್ನು ಒಣಗಿಸಿ, ಯಂತ್ರದಿಂದ ಪುಡಿ ಮಾಡಿ ಚೀಲಗಳಿಗೆ ತುಂಬಿಸುವುದಕ್ಕೆ ಸಮಯಾವಕಾಶ ಹಿಡಿಯುತ್ತಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಹಸಿ ತ್ಯಾಜ್ಯ ಗೊಬ್ಬರ ಗುಣಮಟ್ಟದಿಂದ ಕೂಡಿರುವುದರಿಂದ ಜನರು ಮತ್ತು ರೈತರಿಂದ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ. ರಾಸಾಯನಿಕ ಮಿಶ್ರಣವಿಲ್ಲದ ಈ ಗೊಬ್ಬರ ಆರೋಗ್ಯಕರವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ತರಕಾರಿ, ಹೂವು, ಸೊಪ್ಪು ಬೆಳೆಯುವವರೂ ಹಸಿ ತ್ಯಾಜ್ಯ ಗೊಬ್ಬರವನ್ನು ಬಳಸುವುದಕ್ಕೆ ಮುಂದಾಗಿದ್ದಾರೆ. ಗೊಬ್ಬರದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ನಗರಸಭೆ ಘಟಕವನ್ನು ವಿಸ್ತರಣೆ ಮಾಡುವುದಕ್ಕೆ ಚಿಂತನೆ ನಡೆಸಿದ್ದಾರೆ.-------------
‘ಹಸಿ ತ್ಯಾಜ್ಯದಿಂದ ತಯಾರಿಸಿರುವ ಗೊಬ್ಬರ ಗುಣಮಟ್ಟದಿಂದ ಕೂಡಿದ್ದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಬೆಳೆಗಳಿಗೆ ಆರೋಗ್ಯದಾಯಕವಾಗಿದೆ. ಸಗಣಿ, ತರಕಾರಿ, ಹಣ್ಣು, ಸೊಪ್ಪಿನ ತ್ಯಾಜ್ಯವನ್ನು ೪೫ ದಿನಗಳ ಕಾಲ ಕೊಳೆಸಿ, ಸಂಸ್ಕರಿಸಿ, ಒಣಗಿಸಿ ಆನಂತರ ಪುಡಿ ಮಾಡಿ ೧೦ ಕೆಜಿ ಬ್ಯಾಗ್‌ಗಳಿಗೆ ತುಂಬಿಸಲಾಗುತ್ತಿದೆ. ಇದುವರೆಗೆ ಪ್ರತಿ ಕೆಜಿಗೆ ೪೦ ರು.ನಂತೆ ೧೨೭೦ ಕೆಜಿ ಮಾರಾಟ ಮಾಡಲಾಗಿದೆ.’- ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ
;Resize=(128,128))
;Resize=(128,128))
;Resize=(128,128))