ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಗುಣಮಟ್ಟದ ಆಹಾರ ಉತ್ಪಾದಿಸಲಿ: ಮಲ್ಲಿಕಾರ್ಜುನ

| Published : Dec 24 2024, 12:48 AM IST

ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಗುಣಮಟ್ಟದ ಆಹಾರ ಉತ್ಪಾದಿಸಲಿ: ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಗುಣ ಮಟ್ಟದ ಆಹಾರ ಉತ್ಪಾದನೆ ಮಾಡಿ, ಸ್ವಾವಲಂಬನೆ ಜೀವನ ಅನುಸರಿಸುತ್ತಿರುವುದು ಶ್ಲಾಘನೀಯ ಎಂದು ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಹೇಳಿದರು.

ಹಾವೇರಿ: ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಗುಣ ಮಟ್ಟದ ಆಹಾರ ಉತ್ಪಾದನೆ ಮಾಡಿ, ಸ್ವಾವಲಂಬನೆ ಜೀವನ ಅನುಸರಿಸುತ್ತಿರುವುದು ಶ್ಲಾಘನೀಯ ಎಂದು ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಹೇಳಿದರು.

ನಗರದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಸೋಮವಾರ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ ರೈತ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್‌ನಂತಹ ತುರ್ತು ಪರಿಸ್ಥಿತಿಯಲ್ಲಿ ದೇಶದ ಎಲ್ಲ ಉದ್ಧಿಮೆಗಳು ಸ್ಥಗಿತಗೊಂಡ ಸಂದರ್ಭದಲ್ಲೂ ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಹೊಂದಲು ಕಾರಣೀಕರ್ತರಾದ ರೈತರಿಗೆ ನಮನಗಳು ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ .ಬಿ.ಎಚ್. ಮಾತನಾಡಿ, ಭಾರತದ ಐದನೇ ಪ್ರಧಾನ ಮಂತ್ರಿಯಾದ ಚೌಧರಿ ಚರಣ್ ಸಿಂಗ್‌ ಅವರು ಭಾರತೀಯ ರೈತರ ಜೀವನ ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದರು.

ಜೈ ಜವಾನ-ಜೈ ಕಿಸಾನ್ ಎಂಬ ಪ್ರಸಿದ್ಧ ಘೋಷಣೆಯನ್ನು ಅವರು ಅನುಸರಿಸಿದರು. ನಮ್ಮ ದೇಶದ ರೈತರು ಮಾಡುತ್ತಿರುವ ಮಹತ್ತರ ಕೆಲಸಗಳನ್ನು ಗೌರವಿಸಲು ಚೌಧರಿ ಚರಣಸಿಂಗ್ ಅವರ ಜನ್ಮದಿನವಾದ ಡಿ. 23ಅನ್ನು ರಾಷ್ಟ್ರೀಯ ರೈತರ ದಿನಾಚರಣೆ ಅಥವಾ ಕಿಸಾನ್ ದಿವಸ್ ವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.

ಜೈಕಿಸಾನ್ ಕಂಪನಿಯ ಪ್ರತಿನಿಧಿ ಶರತ ಮೈದೂರ ಅವರು ಮಣ್ಣು ಪರೀಕ್ಷೆಯ ಮಹತ್ವ ಹಾಗೂ ರಸಗೊಬ್ಬರಗಳ ಸಮರ್ಪಕ ಬಳಕೆ ಕುರಿತು ಉಪನ್ಯಾಸ ನೀಡಿದರು.

ರೈತ ಸಂಘಟನೆಯ ಸುರೇಶ ಛಲವಾದಿ ಅವರು ಮಾಜಿ ಪ್ರಧಾನಿಗಳಾದ ಚೌಧರಿ ಚರಣ ಸಿಂಗ್ ಅವರ ಜೀವನ ಚರಿತ್ರೆ ಕುರಿತು ಮಾಹಿತಿ ನೀಡಿದರು.

ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ರಸಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಸಾವಯವ ಕೃಷಿ, ಸಹಜ ಕೃಷಿ ಪದ್ಧತಿಗಳತ್ತ ರೈತರು ಒಲವು ತೋರಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ವಿಶೇಷ ಸಾಧನೆ ತೋರಿದ ಕಬ್ಬೂರ ಗ್ರಾಮದ ಬಸಪ್ಪ ಹೊಸಳ್ಳಿ, ಕೋಣನತಂಬಿಗೆ ಗ್ರಾಮದ ಬೀರಪ್ಪ ರಿತ್ತಿಕುರುಬರ, ಕರ್ಜಗಿ ಗ್ರಾಮದ ಚನ್ನಬಸಪ್ಪ ಸುಳ್ಳಳ್ಳಿ, ಬೆನಕನಹಳ್ಳಿ ಗ್ರಾಮದ ದೇವಲಪ್ಪ ಲಮಾಣಿ, ಕೆರಿಕೊಪ್ಪ ಗ್ರಾಮದ ಹನುಮಂತಪ್ಪ ತಳವಾರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ, ಭುವನೇಶ್ವರ ಶಿಡ್ಲಾಪುರ, ಶಿವಬಸಪ್ಪ ಗೋವಿ, ಡಿಳ್ಳೆಪ್ಪ ಮಣ್ಣೂರ, ಶಿವನಗೌಡ ಗಾಜಿಗೌಡ್ರ, ಮಂಜು ಕದಂ, ಶಿವಯೋಗಿ ಹೊಸಗೌಡ್ರ, ರಾಜೇಸಾಬ ತರ್ಲಘಟ್ಟ, ಬಸವರಾಜ.ಡಿ, ತಾಲೂಕು ಕೃಷಿಕ ಸಮಾಜ, ಜೈಕಿಸಾನ್ ಎಂ.ಸಿ.ಎಫ್. ಕಂಪನಿ ಪ್ರತಿನಿಧಿಗಳು ಮತ್ತು ವಿವಿಧ ರೈತ ಸಂಘಟನೆಗಳು, ತಾಲೂಕಿನ ಕೃಷಿ ಸಖಿ, ಪಶು ಸಖಿಯರು, ಹಾವೇರಿ ಕೃಷಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಇತರೆ ರೈತ ಮುಖಂಡರು, ರೈತ ಮಹಿಳೆಯರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಬಸನಗೌಡ ಪಾಟೀಲ ಸ್ವಾಗತಿಸಿದರು. ಆತ್ಮಾ ಅಧಿಕಾರಿ ಚಂದ್ರಶೇಖರ ಎಸ್.ಕೆ. ವಂದಿಸಿದರು