ರೈತರ ಅಭಿವೃದ್ಧಿಗೆ ಉತ್ಪಾದಕಾ ಸಂಸ್ಥೆಗಳು ಹೆಚ್ಚಾಗಬೇಕು: ಜಿಲ್ಲಾಧಿಕಾರಿ ಡಾ.ಕುಮಾರ

| Published : Feb 17 2025, 12:32 AM IST

ರೈತರ ಅಭಿವೃದ್ಧಿಗೆ ಉತ್ಪಾದಕಾ ಸಂಸ್ಥೆಗಳು ಹೆಚ್ಚಾಗಬೇಕು: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಪಿಎಂಎಫ್‌ಇ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು, ರೈತರು ಬೆಳೆದ ಬೆಳೆಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಗ್ರಾಹಕರ ಗಮನ ಸೆಳೆಯುವ ರೀತಿ ಬ್ರ್ಯಾಡಿಂಗ್ ಆಗಬೇಕು. ಇದರಿಂದ ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯ ಮತ್ತು ರಾಷ್ಟ್ರದಲ್ಲಿ ಮಾರುಕೊಟ್ಟೆ ದೊರೆಯುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರು ಆರ್ಥಿಕ ಅಭಿವೃದ್ಧಿಯಾಗಲು ತಾವು ಬೆಳೆದ ಬೆಳೆಗಳಿಗೆ ತಾವೇ ಬೆಲೆ ಕಟ್ಟಿ ಮಾರಾಟ ಮಾಡುವ ರೀತಿ ಬದಲಾವಣೆ ಆಗಬೇಕು. ಅದಕ್ಕಾಗಿ ರೈತ ಉತ್ಪಾದಕ ಸಂಘಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲೆ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು, ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಾಗೂ ಸಂಪನ್ಮೂಲ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ವ್ಯಾಪಾರ ಮತ್ತು ವ್ಯಾವಹಾರ ಅಭಿವೃದ್ಧಿ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೃಷಿ ಪ್ರಧಾನ ಜಿಲ್ಲೆ ಮಂಡ್ಯದಲ್ಲಿ ತನ್ನದೇ ಆದ ವಿಶೇಷ ಮಹತ್ವ ಹೊಂದಿದೆ. ರೈತರು ಆರ್ಥಿಕವಾಗಿ ಸದೃಢರಾಗಲು ರೈತರು ಬೆಳೆದ ಬೆಳೆಗಳ ಮೌಲ್ಯವರ್ಧನೆಯಾಗಬೇಕು‌. ರೈತ ಉತ್ಪದಕಾ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ರೈತರಿಗೆ ಅಗತ್ಯ ಮಾಹಿತಿ ಒದಗಿಸಬೇಕು ಎಂದರು.

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕಾದರೆ ದಲ್ಲಾಳಿ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಬೇಕು. ರೈತರು ನಿಜವಾಗಿಯೂ ಸ್ವಾವಲಂಬಿಗಳಾಗಲು ರೈತ ಉತ್ಪಾದಕರ ಸಂಸ್ಥೆಗಳ ಅವಶ್ಯಕತೆ ಇದೆ ಎಂದರು.

ಸರ್ಕಾರದ ಪಿಎಂಎಫ್‌ಇ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು, ರೈತರು ಬೆಳೆದ ಬೆಳೆಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಗ್ರಾಹಕರ ಗಮನ ಸೆಳೆಯುವ ರೀತಿ ಬ್ರ್ಯಾಡಿಂಗ್ ಆಗಬೇಕು. ಇದರಿಂದ ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯ ಮತ್ತು ರಾಷ್ಟ್ರದಲ್ಲಿ ಮಾರುಕೊಟ್ಟೆ ದೊರೆಯುತ್ತದೆ ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ದೇಶದ ಜಿಡಿಪಿಗೆ ಸೇವಾ ವಲಯದ ಕೊಡುಗೆ ಅತಿ ಹೆಚ್ಚು. ಅದರಲ್ಲಿ ಅತಿ ಹೆಚ್ಚು ಜನ ಕೃಷಿಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಶ್ರಮ ಪಟ್ಟು ದುಡಿಯುತ್ತಿರುವ ರೈತರಿಗಿಂತ ಹೆಚ್ಚು ಕೃಷಿಗೆ ಸಂಬಂಧಿಸಿದ ಕಂಪನಿಗಳು ಆದಾಯವನ್ನು ಗಳಿಸುತ್ತಿವೆ ಎಂದರು.ರೈತರ ಆದಾಯ ಹೆಚ್ಚಬೇಕಾದರೆ ಇಂತಹ ಕಾರ್ಯಾಗಾರಗಳು ಅಗತ್ಯ. ಮುಕ್ತ ಮನಸ್ಸಿನಿಂದ ವಿಚಾರಗಳು ವಿನಿಮಯ ಮಾಡಿಕೊಂಡು ಅದನ್ನು ಕಾರ್ಯ ಪ್ರವೃತ್ತಿಯಲ್ಲಿ ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ, ರೈತ ಉತ್ಪಾದಕ ಸಂಸ್ಥೆಗಳು ಮುಖ್ಯಸ್ಥರಾದ ಕಾರಸವಾಡಿ ಮಹದೇವ್, ಹರೀಶ್, ಹನುಮಂತೇಗೌಡ, ಸುಬ್ರಹ್ಮಣ್ಯ, ಮಾಯಣ್ಣ, ಚಿಕ್ಕೇಗೌಡ, ಜಗದೀಶ್ ಬಾಬು ಮತ್ತು ಇನ್ನಿತರ ಉಪಸ್ಥಿತರಿದ್ದರು.