ಬೇಸಿಗೆ ಬೆಳೆಯನ್ನು ಜನವರಿ 3 ಮತ್ತು 4ನೇ ವಾರ ಸಸಿಮಡಿ ತಯಾರಿಸುವುದು ಹಾಗೂ ಫೆಬ್ರವರಿ 2 ಮತ್ತು 3ನೇ ವಾರ ನಾಟಿ ಮಾಡಲು ಸೂಕ್ತ ಸಮಯ. ಮಣ್ಣು ಪರೀಕ್ಪೆ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಪ್ರಮಾಣ ಬದಲಾಯಿಸಿ ಕೊಳ್ಳಬಹುದು.
ಕನ್ನಡಪ್ರಭ ವಾರ್ತೆ ಮೈಸೂರು
ವಿಸ್ತರಣಾ ಶಿಕ್ಷಣ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರವು ಭತ್ತದ ಬೆಳೆಯಲ್ಲಿ ಉತ್ಪಾದನಾ ತಾಂತ್ರಿಕತೆಗಳು ಮತ್ತು ಪೌಷ್ಟಿಕ ಕೈತೋಟ ತರಬೇತಿಯನ್ನು ಮೈಸೂರು ತಾಲೂಕು ನಾಗನಹಳ್ಳಿಯಲ್ಲಿ ಆಯೋಜಿಸಿತ್ತು.ಈ ಕಾರ್ಯಕ್ರಮದಲ್ಲಿ ಕೇಂದ್ರದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್ ಕುಮಾರ್ ಮಾತನಾಡಿ, ಕೃಷಿ ವಿವಿ ಅಭಿವೃದ್ಧಿ ಪಡಿಸಿದ ಭತ್ತದ ತಳಿಗಳ ಬಗ್ಗೆ, ಬೇಸಿಗೆ ಭತ್ತದ ಸಸಿಮಡಿ ನಿರ್ವಹಣೆಯಲ್ಲಿ ಮೊಳಕೆ ಕಟ್ಟಿ ಬಿತ್ತನೆ ಮಾಡಿದ ಸಸಿಮಡಿಗಳ ಮೇಲೆ ಪಾರದರ್ಶಕ ಪಾಲಿಥೀನ್ ಹಾಳೆ (300 ಗೇಜ್) ಅನ್ನು ಸುಮಾರು 15 ದಿವಸಗಳವರೆಗೆ ಹೊದಿಸುವುದರಿಂದ ಚಳಿಯಿಂದ ಬೆಳವಣಿಗೆ ಕುಂಠಿತವಾಗುವ ಸಮಸ್ಯೆ ನಿವಾರಿಸಬಹುದು ಎಂದರು.
ಬೇಸಿಗೆ ಬೆಳೆಯನ್ನು ಜನವರಿ 3 ಮತ್ತು 4ನೇ ವಾರ ಸಸಿಮಡಿ ತಯಾರಿಸುವುದು ಹಾಗೂ ಫೆಬ್ರವರಿ 2 ಮತ್ತು 3ನೇ ವಾರ ನಾಟಿ ಮಾಡಲು ಸೂಕ್ತ ಸಮಯ. ಮಣ್ಣು ಪರೀಕ್ಷೆ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಪ್ರಮಾಣ ಬದಲಾಯಿಸಿ ಕೊಳ್ಳಬಹುದು, ಸತುವಿನ ಸಲ್ಫೇಟ್ ಅನ್ನು ಪ್ರತಿ 2 ಬೆಳೆಗಳಿಗೊಮ್ಮೆ ಕೊಡುವುದು. ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ನೀರು ನಿರ್ವಹಣೆ, ಕಳೆ ನಿರ್ವಹಣೆ ಮತ್ತು ಭತ್ತದ ಬೀಜ ಸಂಗ್ರಹಣೆಯಲ್ಲಿ ಮಾತಿ ಹುಳುವಿನ ಹತೋಟಿ ಬಗ್ಗೆ ಅವರು ವಿವರಿಸಿದರು.ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಾತನಾಡಿ, ಮಾದರಿ ಪೌಷ್ಟಿಕ- ಕೈತೋಟದಲ್ಲಿ ಹಾಗೂ ಹಣ್ಣುಗಳನ್ನು ಬೇರೆ ಬೇರೆ ಜಾಗ ಅಥವಾ ಒಟ್ಟುಗೂಡಿಸಿ ಬೆಳೆಯಬಹುದು. ಇವುಗಳ ಬೇಸಾಯವನ್ನು ಲಾಭದಾಯಕವಾಗಿರಿಸಲು ಬಹಳ ಸಮಗ್ರ ರೀತಿಯಲ್ಲಿ ರೂಪಿಸುವುದು ಮುಖ್ಯ ಅಂಶ. ಇದರ ವಿಸ್ತೀರ್ಣವು ಅಲ್ಲಿ ಸಿಗುವ ಸ್ಥಳ, ತರಕಾರಿ ಹಾಗೂ ಹಣ್ಣುಗಳ ದಿನದ ಬೇಡಿಕೆ, ಉಸ್ತುವಾರಿಯ ಸಮಯ ಇವುಗಳ ಮೇಲೆ ಅವಲಂಬಿಸಿದೆ ಎಂದರು.
ಸರಾಸರಿ 4- 5 ಸದಸ್ಯರಿರುವ ಕುಟುಂಬಕ್ಕೆ ತರಕಾರಿಗಳನ್ನು ಒದಗಿಸಲು 15 ಚದರ ಮೀಟರ್ ಗಳ ವಿಸ್ತೀರ್ಣದ ಸ್ಥಳ ಲಭ್ಯತೆ ಮತ್ತು ಕುಟುಂಬದ ಸದಸ್ಯರ ಸಂಖ್ಯೆಯ ಮೇಲೆ ಸಣ್ಣ, ಮಧ್ಯಸ್ಥ ಹಾಗೂ ದೊಡ್ಡ ಕೈತೋಟಗಳನ್ನಾಗಿ ಯೋಜಿಸಿ ಬೆಳೆಸಬಹುದು. ತೋಟದ ರಚನೆ ಮಾಡುವಾಗ ತರಕಾರಿ ಬೆಳೆದ ಪೂರ್ಣ ಬೆಳವಣಿಗೆಗೆ ಅವಶ್ಯಕವಾದ ಸೂರ್ಯನ ಶಾಖ ಸಿಗುವಂತಾಗಲು ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳ ಜಾಗಗಳನ್ನು ತರಕಾರಿ ಬೆಳೆಗಳಿಗೆ ಮೀಸಲಿಡುವುದು ಉತ್ತಮ. ಆದಷ್ಟು ಚದುರಾಕಾರದ ಮಡಿಗಳನ್ನಾಗಿ ವಿಂಗಡಿಸುವುದು ಸೂಕ್ತ ಎಂದು ಅವರು ಹೇಳಿದರು.ಮನೆಯ ಬಲಕೆಯಲ್ಲಿ ವ್ಯರ್ಥವಾಗುವ ನೀರನ್ನು ಕಾಲುವೆ ಮೂಲಕ ಹರಿಸಿ ಸದುಪಯೋಗ ಪಡಿಸಿಕೊಳ್ಳಬಹುದು. ಒಂದೆರಡು ಕಾಂಪೋಸ್ಟ್ ಗುಂಡಿಗಳನ್ನು ತೋಟದಲ್ಲಿ ನೆರಳಿರುವ ಕಡೆ ತೋಡಿಸಿ ತೋಟದ ಹಾಗೂ ಮನೆಯ ವ್ಯರ್ಥ ವಸ್ತುಗಳನ್ನೆಲ್ಲಾ ಸಂಗ್ರಹಿಸಿ, ಸಸಿಮಡಿಗೆ ಹಾಗೂ ತೋಟಕ್ಕೆ ಬೇಕಾಗುವ ಕಾಂಪೋಸ್ಟ್ ತಯಾರಾಗಲು ವ್ಯವಸ್ಥೆ ಮಾಡಬೇಕು ಎಂದು ಅವರು ವಿವರಿಸಿದರು.