ಸಾರಾಂಶ
ಪ್ರೊ. ರೈ ಅವರು ಕನ್ನಡ ಸಾಹಿತ್ಯ, ವಿಮರ್ಶೆ, ಜಾನಪದ ಸಂಶೋಧನೆ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾರಂತ ಅಧ್ಯಯನ ಪೀಠವನ್ನು ಸ್ಥಾಪಿಸಿ ಅದರ ಮೂಲಕ ಕಾರಂತರ ಬದುಕು - ಬರಹಗಳ ಹಲವು ಆಯಾಮಗಳ ದಾಖಲಾತಿ ಇತ್ಯಾದಿ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಸಾಹಿತಿ, ಕಡಲತಡಿಯ ಭಾರ್ಗವ ಡಾ.ಶಿವರಾಮ ಕಾರಂತರ ಹೆಸರಿನಲ್ಲಿ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಮೊದಲ ವರ್ಷದ ಪ್ರಶಸ್ತಿಗೆ ಹಿರಿಯ ಸಾಹಿತಿ, ವಿಶ್ರಾಂತ ಕುಲಪತಿ ಪ್ರೊ ಬಿ.ಎ. ವಿವೇಕ ರೈ ಅವರನ್ನು ಆರಿಸಲಾಗಿದೆ.ಪ್ರೊ. ರೈ ಅವರು ಕನ್ನಡ ಸಾಹಿತ್ಯ, ವಿಮರ್ಶೆ, ಜಾನಪದ ಸಂಶೋಧನೆ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾರಂತ ಅಧ್ಯಯನ ಪೀಠವನ್ನು ಸ್ಥಾಪಿಸಿ ಅದರ ಮೂಲಕ ಕಾರಂತರ ಬದುಕು - ಬರಹಗಳ ಹಲವು ಆಯಾಮಗಳ ದಾಖಲಾತಿ ಇತ್ಯಾದಿ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ನಾಗಪ್ಪ ಗೌಡ, ಹಿರಿಯ ಸಂಶೋಧಕಿ ಡಾ.ರೇಖಾ ಬನ್ನಾಡಿ, ರಂಗ ತಜ್ಞ ವೆಂಕಟರಮಣ ಐತಾಳ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಪ್ರಶಸ್ತಿಯ ಆಯ್ಕೆ ನಡೆಸಿದೆ.ಅ.೧೧ರಂದು ಸಂಜೆ ೪ ಗಂಟೆಗೆ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ನಡೆಯುವ ಕಾರಂತರ ಜನ್ಮದಿನೋತ್ಸವ-ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು 25 ಸಾವಿರ ರು. ಮೊತ್ತ, ಪ್ರಶಸ್ತಿ ಫಲಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಗಣನಾಥ ಎಕ್ಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.