ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿರೋ ಕೇಂದ್ರೀಯ ವಿವಿ ಕುಲಪತಿ ಬಟ್ಟು ಸತ್ಯನಾರಾಯಣ ಕಠಿಣ ಮತ್ತು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಕುಲಪತಿ. ಸಿಯುಕೆ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವೆಂದು ಕರ್ನಾಟಕ ವಿ.ವಿ ಧಾರವಾಡದ ಮಾಜಿ ಕುಲಪತಿ, ಸಿಯುಕೆ ಕಾರ್ಯಕಾರಿ ಮಂಡಳಿ ಸದಸ್ಯ ಪ್ರೊ.ಪ್ರಮೋದ್ ಗೈ ಹೇಳಿದರು.ಸಿಯುಕೆಯಲ್ಲಿ ಕಳೆದ 4 ವರ್ಷಗಳಲ್ಲಿ ವಿಶ್ವವಿದ್ಯಾಲಯದ ಕಾರ್ಯವೈಖರಿ ಮತ್ತು ಅದರ ಪ್ರಗತಿಯನ್ನು ಪರಿಶೀಲಿಸಲು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಟ್ಟು ಸತ್ಯನಾರಾಯಣ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸ್ನೇಹಿ ಕುಲಪತಿ. ಕಳೆದ ನಾಲ್ಕು ವರ್ಷಗಳು ಸಾಂಸ್ಥಿಕ ಅಭಿವೃದ್ಧಿ ಯೋಜನೆ ತರುವುದು ಒಂದು ಉತ್ತಮ ಕೆಲಸ. ಅವರ ನಾಯಕತ್ವವು ಗಮನಾರ್ಹ, ಸಂಶೋಧನಾ ಚಟುವಟಿಕೆಗಳ ಅಭಿವೃದ್ಧಿ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸಿನಲ್ಲಿ ಶಿಸ್ತು, ಆಡಳಿತದಲ್ಲಿ ಪ್ರಗತಿ ಮತ್ತು ಪರೀಕ್ಷಾ ವಿಭಾಗದಲ್ಲಿ ಸುಧಾರಣೆಗಳಿಗೆ ಅವರ ಕೊಡುಗೆ ಗಮನಾರ್ಹವೆಂದರು.ಕುಲಪತಿ ಬಟ್ಟು ಸತ್ಯನಾರಾಯಣ ಅಧ್ಯಕ್ಷೀಯ ನುಡಿಗಳಲ್ಲಿ, ವಿ.ವಿ ಗಳು ಮಾನವ ಸಂಪನ್ಮೂಲ ಅಭಿವೃದ್ಧಿಯ ಕೇಂದ್ರಗಳಾಗಿವೆ. ರಾಷ್ಟ್ರಕ್ಕೆ ಉತ್ತಮ ಭವಿಷ್ಯದ ನಾಯಕರನ್ನು ಒದಗಿಸುವುದು ನಮ್ಮ ಜವಾಬ್ದಾರಿ ಎಂದರು.
ಸಿಯುಕೆಗೆ ಬಂದಾದ ಮೇಲೆ ನೇಮಕಾತಿಗೆ ಆದ್ಯತೆ ನೀಡಿದೆ, ಬೋಧಕ ಮತ್ತು ಬೋಧಕೇತರ ಹುದ್ದೆಗಳೀಗ ಭರ್ತಿ ಆಗಿವೆ, ಶಿಕ್ಷಕರ ಸಂಖ್ಯೆಯು ಅವರ ಸಂಶೋಧನಾ ಯೋಜನೆಗಳನ್ನು ಹೆಚ್ಚಿಸಿದಂತೆ ಮತ್ತು ಹಣಕಾಸು ಕೂಡ ದ್ವಿಗುಣಗೊಂಡಿದೆ. ಹಾಸ್ಟೆಲ್‍ಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರಿಂದ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್‍ನಲ್ಲಿ ವಾಸವಾಗಿದ್ದಾರೆ.ಪ್ರವೇಶ ಪರೀಕ್ಷೆಯಿಂದ ಮತ್ತು ಫಲಿತಾಂಶಗಳವರೆಗೆ ವಿ.ವಿ ಕಾರ್ಯಚಟುವಟಿಕೆ ಡಿಜಿಟಲೀಕರಣ ಮಾಡಲಾಗಿದೆ. ಎಲ್ಲವನ್ನೂ ಕಾಗದರಹಿತಗೊಳಿಸಲಾಗಿದೆ. ಸಮರ್ಥ್ ಪೋರ್ಟಲ್‍ನ ಎಲ್ಲಾ 32 ಮಾಡ್ಯೂಲ್‍ಗಳನ್ನು ಜಾರಿಗೆ ತಂದ ನಾಲ್ಕು ವಿ.ವಿ. ಗಳಲ್ಲಿ ನಮ್ಮದು ಒಂದು, ಎನ್‍ಇಪಿ 2020 ಅನ್ನು ಪೂರ್ಣ ಅರ್ಥದಲ್ಲಿ ಜಾರಿಗೆ ತಂದ ಮೊದಲ ವಿ.ವಿ ಎಂದರು.
ಪ್ರಭಾರಿ ಕುಲಸಚಿವ ಪ್ರೊ. ಚನ್ನವೀರ್ ಆರ್.ಎಂ, ಪುಷ್ಪಾ ಸವದತ್ತಿ, ಆರ್.ಎಸ್. ಹೆಗಡಿ, ಹಣಕಾಸು ಅಧಿಕಾರಿ ರಾಮ ದೊರೈ, ಗಣೇಶ್ ಪವಾರ್, ಜಿ.ಆರ್. ಅಂಗಡಿ, ಉಪಕುಲಸಚಿವ ಡಾ. ಅಜರುದ್ದೀನ್, ಬಸವರಾಜ್ ಕುಬಕಡ್ಡಿ, ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ ಮಾತನಾಡಿದರು.ವಾಧ್ವನಿ ಫೌಂಡೇಶನ್ ಸಹಯೋಗದೊಂದಿಗೆ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಪ್ರಮಾಣಪತ್ರ ಕೋರ್ಸ್‌ನ್ನು ಪ್ರಾರಂಭಿಸಲಾಯಿತು. ಸಿಯುಕೆಯ ಸಾಂಸ್ಥಿಕ ಅಭಿವೃದ್ಧಿ ಯೋಜನೆ ಮತ್ತು ಆರ್.ಎಸ್. ಹೆಗಡಿ ಅವರ “ಅನ್ವಯಿಕ ಕೃತಕ ಬುದ್ಧಿಮತ್ತೆ” ಕುರಿತು ಸಂಪಾದಿತ ಪುಸ್ತಕ ಬಿಡುಗಡೆ ಮಾಡಲಾಯಿತು.
ಸಂಯೋಜಕ ಬಸವರಾಜ ಡೋಣೂರ ಸ್ವಾಗತಿಸಿದರು. ಡಾ. ರಾಜೀವ್ ಜೋಶಿ ನಿರೂಪಿಸಿದರು, ಡಾ. ರವೀಂದ್ರ ಪಂಡಿತ್ ವಂದಿಸಿದರು.