ಜನಪರ ಅಭಿವೃದ್ಧಿ ಸಂಶೋಧನೆಗೆ ಪ್ರೊ.ಇಂದುಮತಿ ಕರೆ

| Published : Mar 22 2024, 01:01 AM IST / Updated: Mar 22 2024, 01:02 AM IST

ಜನಪರ ಅಭಿವೃದ್ಧಿ ಸಂಶೋಧನೆಗೆ ಪ್ರೊ.ಇಂದುಮತಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ತಾಲೂಕಿನ ದಾವಣಗೆರೆ ವಿವಿಯ ಶಿವಗಂಗೋತ್ರಿಯಲ್ಲಿ ಗುರುವಾರ ಯುವ ಪ್ರಾಧ್ಯಾಪಕರ ಸಾಮರ್ಥ್ಯ ವೃದ್ಧಿ ಮತ್ತು ಸಂಶೋಧನಾ ವಿನ್ಯಾಸ, ಸಂಶೋಧನಾ ವಿನ್ಯಾಸ ಹಾಗೂ ದತ್ತಾಂಶ ವಿಶ್ಲೇಷಣೆ ಕುರಿತು ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಮಾಜದ ಎಲ್ಲಾ ವರ್ಗಗಳ ಸಮಗ್ರ, ಸುಸ್ಥಿರ ಅಭಿವೃದ್ಧಿಯ ದೂರದೃಷ್ಟಿಯಿಂದ ಕೂಡಿದ ಸಂಶೋಧನೆಗಳಿಗೆ ವಿದ್ಯಾರ್ಥಿಗಳು ಆದ್ಯತೆ ನೀಡುವ ಜೊತೆಗೆ ದೇಶದ ಅಭಿವೃದ್ಧಿ ಅನುಷ್ಠಾನದಲ್ಲಿ ಸಂಶೋಧನೆಗಳ ಶಿಫಾರಸ್ಸುಗಳು ಅವಕಾಶ ಪಡೆಯುವಂತಾಗ ಬೇಕು ಎಂದು ದಾವಣಗೆರೆ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಇಂದುಮತಿ ತಿಳಿಸಿದರು.

ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ಗುರುವಾರ ಅರ್ಥಶಾಸ್ತ್ರ ವಿಭಾಗವು ನವದೆಹಲಿಯ ಐಸಿಎಸ್‌ಆರ್‌ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಯುವ ಪ್ರಾಧ್ಯಾಪಕರ ಸಾಮರ್ಥ್ಯವೃದ್ಧಿ ಮತ್ತು ಸಂಶೋಧನಾ ವಿನ್ಯಾಸ, ಹಾಗೂ ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಅವರು, ಜನಪರ ಅಭಿವೃದ್ಧಿಯ ಸಂಶೋಧನೆಗಳಾಗುವತ್ತ ನಿಮ್ಮೆಲ್ಲರ ಪ್ರಯತ್ನಗಳಿರಲಿ ಎಂದರು.

ಸಮಾಜಮುಖಿ ಸಂಶೋಧನೆಗಳು ದೇಶದ ಗ್ರಾಮೀಣ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಪೂರಕ ವಾಗಿರಲಿ. ಪರಿಸರವನ್ನು ರಕ್ಷಿಸುವ, ಜನರನ್ನು ಸಂಕಷ್ಟದಿಂದ ಪಾರು ಮಾಡಿ, ಸ್ವಾವಲಂಬನೆಯ ಬದುಕಿಗೆ ಪ್ರೇರೇಪಿಸುವ ನಿಟ್ಟಿನಲ್ಲಿ ಯೋಜನೆಗಳು ಸಿದ್ಧವಾಗಬೇಕು. ಸಂಶೋಧನೆಗೆ ಸಂಗ್ರಹಿಸುವ ದತ್ತಾಂಶಗಳು ವಾಸ್ತವ ನೆಲೆಯನ್ನು ಅರ್ಥೈಸು ವಂತಿರಬೇಕು. ಸಮಸ್ಯೆಯ ಮೂಲವನ್ನು ಅರ್ಥ ಮಾಡಿಕೊಂಡು, ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಈಚಿನ ಅತ್ಯಾಧುನಿಕ ತಂತ್ರಜ್ಞಾನ, ತಂತ್ರಾಂಶಗಳು ಜನಸ್ನೇಹಿಯಾಗಿವೆ. ಇಂತಹ ತಂತ್ರಜ್ಞಾನ, ತಂತ್ರಾಂಶಗಳು ಸಂಶೋಧನೆಯ ಮಾಹಿತಿ ಸಂಗ್ರಹ ಹಾಗೂ ಫಲಿತಾಂಶ ಪಡೆಯಲು ಸಹಕಾರಿಯಾಗಿವೆ. ಸಂಶೋಧನಾರ್ಥಿಗಳು ಅಧ್ಯಯನ, ಸಂಶೋಧನೆಯ ಜೊತೆಗೆ ತಂತ್ರಜ್ಞಾನ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಉತ್ತಮ ಗುಣಮಟ್ಟದ ಮತ್ತು ಮೌಲ್ಯವರ್ಧಿತ ಫಲಿತಾಂಶಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ. ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಸಾಕ್ಷರತೆ ಪ್ರಭಾವ ಹೆಚ್ಚುತ್ತಲೇ ಇದೆ. ಇದು ಡಿಜಿಟಲ್ ಸಾಕ್ಷರತೆಯ ಅಂತರವನ್ನು ಹೆಚ್ಚಿಸುತ್ತಿದೆ. ಇದು ಬೆಳವಣಿಗೆಯ ವೇಗದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಅಧ್ಯಯನ ಅವಲೋಕನದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ದಾ.ವಿ.ವಿ. ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಸುಸ್ಥಿರತೆಯೊಂದಿಗೆ ನಾವಿನ್ಯತೆಯನ್ನು, ಭವಿಷ್ಯ ದ ಚಿಂತನೆಯ ಪರಿಕಲ್ಪನೆಗಳ ಶ್ರೇಣಿಯನ್ನೂ ಪರಿಶೋಧಿಸುತ್ತವೆ. ಹೊಸತನ ರೂಪಿಸುವ ಜೊತೆಗೆ ಸಾಮಾಜಿಕ ಜವಾಬ್ಧಾರಿ ಮತ್ತು ಪರಿಸರ ಪ್ರಜ್ಞೆಯನ್ನೂ ಬೆಳೆಸಲು ಜಾಗೃತಿಯ ಆಂದೋಲನವಾಗಬೇಕು. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ, ಕೌಶಲ್ಯಗಳ ಕೊರತೆಗಳು ತೀವ್ರ ಹಿನ್ನಡೆಗೆ ಕಾರಣವಾಗುತ್ತಿವೆ. ಉದ್ಯೋಗಾದಾರಿತ ಶಿಕ್ಷಣ ಮತ್ತು ಜೀವನ ಆದಾರಿತ ಶಿಕ್ಷಣದ ಪರಿಕಲ್ಪನೆ ಯನ್ನು ಅರ್ಥ ಮಾಡಿಸಬೇಕಿದೆ. ವಾಸ್ತವದ ನೆಲೆಯಲ್ಲಿ ನಿಂತು, ಭ‍ವಿಷ್ಯ ಕಟ್ಟುವ ಕೆಲಸವಾಗಬೇಕು ಎಂದರು.

ದಾ.ವಿ.ವಿ. ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷ, ಕಾರ್ಯಾಗಾರದ ಸಂಯೋಜಕ ಪ್ರೊ.ಹುಚ್ಚೇಗೌಡ, ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಕೆ.ಬಿ.ರಂಗಪ್ಪ, ಪ್ರೊ.ಎಸ್.ಸುಚಿತ್ರಾ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.