ರೈತ ಹುತಾತ್ಮರ ದಿನಾಚರಣೆ ನಿಮಿತ್ತ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿಗೆ ಮಾಲಾರ್ಪಣೆ

| Published : Jul 23 2024, 12:32 AM IST

ರೈತ ಹುತಾತ್ಮರ ದಿನಾಚರಣೆ ನಿಮಿತ್ತ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿಗೆ ಮಾಲಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕೃತಿ ವಿಕೋಪದಿಂದಾಗಿ ಮಳೆಗಾಳಿಯಿಂದ ಬೆಳೆ ನಷ್ಟಕೊಳಗಾಗಿರುವ ರೈತರಿಗೆ ಸರ್ಕಾರ ಮೀಸಲಿಟ್ಟಿರುವ ಹಣದಲ್ಲಿ ಪರಿಹಾರ ವಿತರಣೆ ಮಾಡಬೇಕು. ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆಯಲ್ಲಿ 2023 .24ನೇ ಸಾಲಿನಲ್ಲಿ ಪಾಲಿಸಿದಾರರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ರೈತ ಸಂಘದ ಕಾರ್ಯಕರ್ತರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಸೋಮವಾರ ರೈತ ಹುತಾತ್ಮರ ದಿನ ಅಂಗವಾಗಿ ಪಟ್ಟಣದ ಮಳವಳ್ಳಿ ರಸ್ತೆಯಲ್ಲಿ ರೈತ ಸಂಘದ ಸಂಸ್ಥಾಪಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಕಚೇರಿ ಆವರಣದಲ್ಲಿ ಕೆಲಕಾಲ ಧರಣಿ ನಡೆಸಿದ ಪ್ರತಿಭಟಕಾರರು ಬೆಳೆ ನಷ್ಟ ಪರಿಹಾರ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರಕೃತಿ ವಿಕೋಪದಿಂದಾಗಿ ಮಳೆಗಾಳಿಯಿಂದ ಬೆಳೆ ನಷ್ಟಕೊಳಗಾಗಿರುವ ರೈತರಿಗೆ ಸರ್ಕಾರ ಮೀಸಲಿಟ್ಟಿರುವ ಹಣದಲ್ಲಿ ಪರಿಹಾರ ವಿತರಣೆ ಮಾಡಬೇಕು. ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆಯಲ್ಲಿ 2023 .24ನೇ ಸಾಲಿನಲ್ಲಿ ಪಾಲಿಸಿದಾರರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಕೊಪ್ಪದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಹಾಗೂ ಕೆ.ಎಂ.ದೊಡ್ಡಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸರ್ಕಾರ ನಿಗದಿಪಡಿಸಿರುವ ಪ್ರತಿಟನ್ ಕಬ್ಬಿಗೆ 150 ರು. ಬಾಕಿ ಹಣವನ್ನು ಕಾರ್ಖಾನೆಗಳು ಪ್ರಾರಂಭವಾಗುವ ಮುನ್ನವೇ ವಿತರಣೆ ಮಾಡಬೇಕು. ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ಮಾರ್ಕೊನಹಳ್ಳಿ ಡ್ಯಾಂನಿಂದ ನೀರು ಹರಿಸಿ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಮತ್ತು ಸಹಕಾರ ಕಚೇರಿಗಳಿಗೆ ಚಡ್ಡಿ ಹಾಗೂ ಪಂಚೆ ಧರಿಸಿ ಬರುವ ರೈತರಿಗೆ ಗೌರವ ಕೊಡುವ ಮನೋಭಾವವನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ಹಾಲು ಉತ್ಪಾದಕರಿಗೆ ಸರ್ಕಾರದಿಂದ ಪಾವತಿ ಆಗಬೇಕಾದ 5 ರು. ಪ್ರೋತ್ಸಾಹ ಧನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ರೈತ ಮುಖಂಡರು ತಹಸಿಲ್ದಾರ್ ಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಯರಗನಹಳ್ಳಿ ರಾಮಕೃಷ್ಣಯ್ಯ, ಅಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಕುದುರಗುಂಡಿ ನಾಗರಾಜು, ಸೋಶಿ ಪ್ರಕಾಶ್, ಉಮೇಶ, ಶಿವರಾಮು, ನ.ಲಿ.ಕೃಷ್ಣ, ಚಿಕ್ಕಲಿಂಗಯ್ಯ, ಗುಳೂರು ಉಮೇಶ, ಮಲ್ಲರಾಜು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ .ಉಮಾಶಂಕರ್ ಸೇರಿದಂತೆ ಹಲವು ರೈತ ಮತ್ತು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.