ಒಳ್ಳೆ ನಾಯಕರ ನಿರೀಕ್ಷೆ ಬಗ್ಗೆ ಜನರಲ್ಲಿ ಗೊಂದಲ: ಕೃಷ್ಣ ಭಟ್ಟ

| Published : Aug 23 2024, 01:01 AM IST

ಒಳ್ಳೆ ನಾಯಕರ ನಿರೀಕ್ಷೆ ಬಗ್ಗೆ ಜನರಲ್ಲಿ ಗೊಂದಲ: ಕೃಷ್ಣ ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕಾರಣ ಇಂದು ಕಲುಷಿತವಾಗಿದೆ. ಆದರೂ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವ, ಯೋಗ್ಯತೆ ಇರುವ ವ್ಯಕ್ತಿಗಳ ನೇತೃತ್ವ ಸಮಾಜಕ್ಕೆ ಸಿಗುವ ವಿಶ್ವಾಸವಿದೆ ಎಂದು ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಪಿ.ವಿ. ಕೃಷ್ಣ ಭಟ್ಟ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಕಾರಣ ಇಂದು ಕಲುಷಿತವಾಗಿದೆ. ಆದರೂ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವ, ಯೋಗ್ಯತೆ ಇರುವ ವ್ಯಕ್ತಿಗಳ ನೇತೃತ್ವ ಸಮಾಜಕ್ಕೆ ಸಿಗುವ ವಿಶ್ವಾಸವಿದೆ ಎಂದು ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಪಿ.ವಿ. ಕೃಷ್ಣ ಭಟ್ಟ ಹೇಳಿದರು.

ನಗರದ ಗವಿಪುರದಲ್ಲಿರುವ ಅದಮ್ಯ ಚೇತನ ಆವರಣದಲ್ಲಿ ‘ಅನಂತಪಥ’ ಮಾಸಪತ್ರಿಕೆಯ 50ನೇ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ರಾಜಕಾರಣಿಗಳ ನಡುವಿನ ಪರಸ್ಪರ ಟೀಕೆಗಳು, ವಾದ-ವಿವಾದಗಳನ್ನು ನೋಡಿದರೆ ಅವರು ಯಾವ ಮಟ್ಟಕ್ಕೆ ಹೋಗುತ್ತಿದ್ದಾರೆ. ಇವರಿಂದ ಎಂತಹ ನಾಯಕತ್ವವನ್ನು ದೇಶ ನಿರೀಕ್ಷೆ ಮಾಡಬಹುದು ಎಂಬ ಗೊಂದಲ ಜನರಲ್ಲಿ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಷ್ಠಾನದ ಕಾರ್ಯದರ್ಶಿ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ದೇಶದ ಅಭಿವೃದ್ಧಿ ಕುರಿತು ಚಿಂತನೆ ಮಾಡುವ ನಾಯಕತ್ವ ತರಬೇತಿ ಮತ್ತು ಸಾರ್ವಜನಿಕ ನೀತಿ ಸಂಶೋಧನೆ ಕೇಂದ್ರವನ್ನು ಅನಂತಕುಮಾರ್ ಪ್ರತಿಷ್ಠಾನದ ಮೂಲಕ ಪ್ರಾರಂಭಿಸುವ ಸಿದ್ಧತೆ ನಡೆದಿದೆ. ಅನಂತ ಪ್ರೇರಣಾ ಕೇಂದ್ರದ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ನಾಯಕತ್ವ ತರಬೇತಿ ಶಿಬಿರವನ್ನು ಈಗಾಗಲೇ ಆರಂಭಿಸಲಾಗಿದೆ. ಸಚಿವರಾಗಿದ್ದಾಗ ಅನಂತಕುಮಾರ್ ಕಾರ್ಯಗಳನ್ನು ಜನರಿಗೆ ತಲುಪಿಸಲು ಕೋವಿಡ್ ಲಾಕ್‌ಡೌನ್ ವೇಳೆ ಅನಂತಪಥ ಪತ್ರಿಕೆ ಆರಂಭಿಸಲಾಯಿತು. ಅವರು ಜೊತೆಗಿಲ್ಲದಿದ್ದರೂ ಪ್ರತಿಷ್ಠಾನದ ಮೂಲಕ ನಡೆಯುತ್ತಿರುವ ಸೇವಾ ಕಾರ್ಯಗಳನ್ನು ನಿರಂತರವಾಗಿ ಪ್ರಕಟಿಸುತ್ತಾ ಬರಲಾಗಿದೆ ಎಂದು ಹೇಳಿದರು. ಲೇಖಕ ಬಾಬು ಕೃಷ್ಣಮೂರ್ತಿ ಮಾತನಾಡಿ, ಅನಂತಕುಮಾರ್ ಒಬ್ಬ ವ್ಯಕ್ತಿ ಅಲ್ಲ, ಸಂಸ್ಥೆಯಾಗಿದ್ದರು. ನೂರಾರು ಜನರ ಕೆಲಸಗಳನ್ನು ಒಬ್ಬರೇ ಮಾಡುತ್ತಿದ್ದರು. ದೇವರು ಕೊಟ್ಟ ಶಕ್ತಿಯನ್ನು ಸಮಾಜ ಸೇವೆಗೆ ಬಳಸಿದರು. ಅಕಾಲಿಕವಾಗಿ ನಿಧನದ ಬಳಿಕ ಅವರ ಕೆಲಸಗಳನ್ನು ತೇಜಸ್ವಿನಿಯವರು ಚೆನ್ನಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಅನಂತಪಥ ಸಂಪಾದಕ ಟಿ.ಎಸ್.ಗೋಪಾಲ್, ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್, ವಿಷ್ಣುಕಾಂತ್ ಮತ್ತಿತರರು ಉಪಸ್ಥಿತರಿದ್ದರು.