ಕನ್ನಡ ವಿದ್ವತ್ ಪರಂಪರೆ ದಾಖಲಿಸುವ ಕೆಲಸ ನಡೆಯಲಿ

| Published : Dec 20 2024, 12:45 AM IST

ಸಾರಾಂಶ

ಕನ್ನಡ ಪರಂಪರೆಯ ಸಾಹಿತ್ಯದ ಆಸಕ್ತಿ ನಮ್ಮ ತಲೆಮಾರಿಗೆ ಮುಗಿಯಿತೆಂದು ಭಾವಿಸಿದ್ದೆ. ಆದರೆ, ನರಹಳ್ಳಿ ಅವರ ಕೃತಿ ಹೊಸ ತಲೆಮಾರಿಗೆ ಭರವಸೆಯ ಬಳ್ಳಿಯಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಅಭಿಜಾತ ಪರಂಪರೆಯ ಇತಿಹಾಸ ಬರೆಯಬೇಕು. ಭಾಷೆ ಹೇಗೆ ಮುನ್ನಡೆ ಕಂಡಿದೆ ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಕನ್ನಡ ವಿದ್ವತ್ ಪರಂಪರೆಯನ್ನು ದಾಖಲಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಹಿರಿಯ ವಿದ್ವಾಂಸ ಪ್ರೊ.ಟಿ.ವಿ. ವೆಂಕಟಾಚಲಶಾಸ್ತ್ರಿ ತಿಳಿಸಿದರು.ನಗರದ ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಅಭಿನವ ಪ್ರಕಾಶನವು ಗುರುವಾರ ಆಯೋಜಿಸಿದ್ದ ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ‘ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡ ಪರಂಪರೆಯ ಸಾಹಿತ್ಯದ ಆಸಕ್ತಿ ನಮ್ಮ ತಲೆಮಾರಿಗೆ ಮುಗಿಯಿತೆಂದು ಭಾವಿಸಿದ್ದೆ. ಆದರೆ, ನರಹಳ್ಳಿ ಅವರ ಕೃತಿ ಹೊಸ ತಲೆಮಾರಿಗೆ ಭರವಸೆಯ ಬಳ್ಳಿಯಾಗಿದೆ. ಇಂತಹ ಪುಸ್ತಕಗಳನ್ನು ಓದಿದರೆ ಯುವ ಮನಸ್ಸುಗಳು ಖಂಡಿತಾ ಸಾಹಿತ್ಯದ ಕಡೆಗೆ ಆಸಕ್ತಿ ಬೆಳೆಸಿಕೊಳ್ಳುವರು ಎಂದು ಅವರು ಹೇಳಿದರು.ಹಳೆಗನ್ನಡದ ಒಂದೊಂದು ಪದ್ಯಪದಗಳ ಬಗೆಗೆ ನೂರಾರು ಪುಟಗಳ ಬರವಣಿಗೆ ಬಂದಿದ್ದರೂ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಕೃತಿಯು ಕನ್ನಡ ಸಾಹಿತ್ಯವನ್ನು ಅಪೂರ್ವವಾಗಿ ಹಿಡಿದಿಟ್ಟಿದೆ. ಹಲ್ಮಿಡಿ ಶಾಸನದಿಂದ ಆರಂಭವಾಗಿ ವರ್ತಮಾನದವರೆಗಿನ ಸಾಹಿತ್ಯ ಕಥನವನ್ನು ದಾಖಲಿಸಿದೆ. ವಿಮರ್ಶೆ ಮಾಡುವ, ಚಿಂತನೆಗೆ ಹಚ್ಚುವ ಕೆಲಸವನ್ನು ಕೃತಿಯು ಮಾಡುತ್ತದೆ. ಕ್ರಮಬದ್ಧವಾಗಿ ಓದಿಸುವುದಲ್ಲದೇ ಪರಸ್ಪರ ಚರ್ಚಿಸುವಂತೆ ಮಾಡುತ್ತದೆ. ವಿಮರ್ಶಾ ಕೃತಿಯು ಓದುಗರಿಗೆ ಸ್ವವಿಮರ್ಶಾಶಕ್ತಿಯನ್ನೂ ಬೆಳೆಸುತ್ತದೆ ಎಂದು ಅವರು ತಿಳಿಸಿದರು.ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ನರಹಳ್ಳಿ ಅವರ ಎಲ್ಲಾ ಕೃತಿಗಳು ಕನ್ನಡ ಸಾಹಿತ್ಯ ಪರಂಪರೆಯ ವಿದ್ಯಾರ್ಥಿಗಳಿಗೆ ಒಳನೋಟ ಕೊಡುವ ಆಕಾರ ಗ್ರಂಥಗಳಾಗಿವೆ ಎಂದು ಬಣ್ಣಿಸಿದರು.ಸಾಹಿತ್ಯದ ಪ್ರಾಮಾಣಿಕ ಓದುಗ ಪೂರ್ವಗ್ರಹಗಳನ್ನು ಬಿಡಿಸಿಕೊಂಡು ಓದುವ ಪರಿಯನ್ನು ಸಾಧಿಸಿಕೊಳ್ಳುವುದೇ ದೊಡ್ಡ ಸಾಹಸ. ಇಂದು ಕೃತಿಯನ್ನು ಓದದೆ ವಿರೋಧವಾಗಿ ಮಾತನಾಡುವುದೇ ಒಂದು ವಾಂಛೆಯಾಗಿದೆ ಎಂದು ಅವರು ವಿಷಾದಿಸಿದರು.ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮೊಮ್ಮಕ್ಕಳಾದ ಆದ್ಯ ಗುರುಪ್ರಸಾದ್ ಮತ್ತು ಅವನಿ ಗುರುಪ್ರಸಾದ್ ಕೃತಿ ಲೋಕಾರ್ಪಣೆಗೊಳಿಸಿದರು. ಪುಸ್ತಕದ ಮೊದಲ ಪ್ರತಿಯನ್ನು ಪ್ರೊ. ಪಂಡಿತಾರಾಧ್ಯ ಅವರಿಗೆ ನೀಡಲಾಯಿತು.ಮಹಾಜನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕೃತಿಕಾರ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಅಭಿನವ ರವಿಕುಮಾರ್, ರಜನಿ ನರಹಳ್ಳಿ, ಸಹನಾ, ಡಾ.ಎಚ್.ಆರ್. ತಿಮ್ಮೇಗೌಡ, ಸೂರ್ಯವಂಶಿ, ನಿಂಗರಾಜು ಚಿತ್ತಣ್ಣನವರ್ ಮೊದಲಾದವರು ಇದ್ದರು.---ಕೋಟ್...ಇಂದಿನ ಸಮಾಜದಲ್ಲಿ ಹಿಂಸೆ, ಅನ್ಯಾಯಗಳ ಮೇಲಾಟವಾಗಿದೆ. ಹೊಸ ತಲೆಮಾರು ನಂಬಿಕೆಯನ್ನೆ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಹೀಗಾಗಿ ನಮ್ಮ ಪರಂಪರೆಯ ಸಾಹಿತ್ಯವನ್ನು ಪರಿಚಯಿಸಿದರೆ ಅವರ ಬದುಕು ಹಸನಾಗಬಹುದೆಂಬ ಕಾರಣದಿಂದ ಈ ಪುಸ್ತಕ ಬರೆದೆ.- ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಚಿಂತಕ