ಸಾರಾಂಶ
ಶಾಲಾ ಹಂತದಲ್ಲಿ ಎಲ್ಲಾ ವಿಷಯಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಗುರುತಿಸಿ ಸೂಕ್ತ ಮಾರ್ಗ ಮಾರ್ಗದರ್ಶನ ನೀಡಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರಿಗೆ ವೃತ್ತಿ ಬದ್ಧತೆ ಅಗತ್ಯ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ಡಯಟ್‍ನಲ್ಲಿ ಜಿಲ್ಲೆಯ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಗುಣಾತ್ಮಕ ಕಲಿಕೆ ಮತ್ತು ಫಲಿತಾಂಶ ಸುಧಾರಣೆ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಎಸ್ಎಸ್ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯುವಂತೆ ಮುಖ್ಯ ಶಿಕ್ಷಕರು ಶಿಕ್ಷಕರು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಶಾಲಾ ಹಂತದಲ್ಲಿ ಎಲ್ಲಾ ವಿಷಯಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಗುರುತಿಸಿ ಘಟಕವಾರು ಸರಣಿ ಪರೀಕ್ಷೆ ನಡೆಸಬೇಕು. ವಿಶೇಷ ತರಗತಿ, ಆಪ್ತ ಸಮಾಲೋಚನೆ ಮೂಲಕ ಮಕ್ಕಳಿಗೆ ಕ್ಲಿಷ್ಟವಾಗುವ ವಿಷಯವನ್ನು ಗುರುತಿಸಿ ಮಾರ್ಗದರ್ಶನ ಮಾಡಬೇಕು ಎಂದರು.ನೋಡಲ್ ಅಧಿಕಾರಿ ಎಸ್.ಸಿ.ಪ್ರಸಾದ್ ಮಾತನಾಡಿ, ಮುಖ್ಯ ಶಿಕ್ಷಕರು ಪ್ರತಿ ಶನಿವಾರ ಶಿಕ್ಷಕರ ಸಭೆ ನಡೆಸಿ ವಿಷಯವಾರು ಮಕ್ಕಳ ಕಲಿಕಾ ಪ್ರಗತಿ ಕುರಿತು ಚರ್ಚಿಸಬೇಕು. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಮಾದರಿ ಪರಿಚಯಿಸಿ ಪ್ರಶ್ನೆಗಳ ವಿಧ, ನಿಗದಿಪಡಿಸಿರುವ ಅಂಕಗಳು ಮತ್ತು ಉತ್ತರಿಸುವ ಸಮಯ ಗೊತ್ತುಪಡಿಸಲು ಶಾಲಾ ಹಂತದಲ್ಲಿ ಸರಣಿ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ, ಚಕ್ರೀಯ ಬದಲಾವಣೆ ಪರೀಕ್ಷೆ ನಡೆಸಿ ಗುಣಾತ್ಮಕ ಫಲಿತಾಂಶ ತರಬೇಕು ಎಂದರು.
ಹಿರಿಯ ಉಪನ್ಯಾಸಕರಾದ ಎಸ್.ಜ್ಞಾನೇಶ್ವರ, ಎಸ್.ಆರ್.ಪೂರ್ಣಿಮಾ, ತಿಪ್ಪೇಸ್ವಾಮಿ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ಕೆ.ಆರ್.ಲೋಕೇಶ್, ತಿಮ್ಮರಾಜು, ಜ್ಯೋತಿ, ಅನಿಲ್ ಕುಮಾರ್ ಮತ್ತು ಮುಖ್ಯ ಶಿಕ್ಷಕರು ಹಾಜರಿದ್ದರು.