ಧಾರವಾಡ ಹಾಲು ಉತ್ಪಾದಕ ಸಂಘದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆನಿನಮನೆ ಮಾತನಾಡಿ, ವೃತ್ತಿ ನಿಷ್ಠೆ ಮತ್ತು ಜನರೊಂದಿಗಿನ ಸಂಬಂಧ ಎನ್ನುವುದು ಬೇರೆಯವರಿಗೆ ಮಾದರಿಯಾಗಿರಬೇಕು. ಅಂಥ ಒಂದು ಸಾರ್ಥಕ ಸೇವೆ ಕೆ.ಜಿ. ಹೆಗಡೆಯವರದ್ದಾಗಿದೆ ಎಂದರು.
ಯಲ್ಲಾಪುರ: ಯಾವ ನೌಕರ ತನ್ನ ವೃತ್ತಿಯಲ್ಲಿ ಜನರನ್ನು ಪ್ರೀತಿ, ಗೌರವದಿಂದ ಕಾಣುತ್ತಾನೋ ಅವರನ್ನು ಜನ ಅಷ್ಟೇ ಗೌರವ, ಪ್ರೀತಿಯಿಂದ ಕಾಣುತ್ತಾರೆ ಎನ್ನುವುದಕ್ಕೆ ಪಶುವೈದ್ಯ ಪರಿವೀಕ್ಷಕ ಕೆ.ಜಿ. ಹೆಗಡೆಯವರೇ ನಿದರ್ಶನ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ವಜ್ರಳ್ಳಿ ಸರ್ವೋದಯ ಸಭಾಭವನದಲ್ಲಿ ನಿವೃತ್ತ ಹಿರಿಯ ಪಶು ವೈದ್ಯ ಪರೀಕ್ಷಕ ಕೆ.ಜಿ. ಹೆಗಡೆ ಅವರ ಬೀಳ್ಕೊಡುಗೆ ಹಾಗೂ ನಾಗರಿಕ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಬ್ಬ ಸರ್ಕಾರಿ ನೌಕರನ ಸಮಾಜಸೇವೆಯು ಅವನ ನಿವೃತ್ತಿಯ ನಂತರ ಜನ ಇಷ್ಟು ಪ್ರೀತಿ ಆದರ ತೋರುತ್ತಾರೆಂದರೆ ಹುಬ್ಬೇರಿಸುವಂಥದ್ದು. ಈ ರೀತಿ ಮಾದರಿ ನೌಕರರು, ಅಧಿಕಾರಿಗಳು ಇದ್ದರೆ ವ್ಯವಸ್ಥೆ ಸುಲಲಿತವಾಗಿ ಸಾಗುತ್ತದೆ ಎಂದರು.ಧಾರವಾಡ ಹಾಲು ಉತ್ಪಾದಕ ಸಂಘದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆನಿನಮನೆ ಮಾತನಾಡಿ, ವೃತ್ತಿ ನಿಷ್ಠೆ ಮತ್ತು ಜನರೊಂದಿಗಿನ ಸಂಬಂಧ ಎನ್ನುವುದು ಬೇರೆಯವರಿಗೆ ಮಾದರಿಯಾಗಿರಬೇಕು. ಅಂಥ ಒಂದು ಸಾರ್ಥಕ ಸೇವೆ ಕೆ.ಜಿ. ಹೆಗಡೆಯವರದ್ದಾಗಿದೆ ಎಂದರು.
ಕಳಚೆ ಸಹ್ಯಾದ್ರಿ ಸೇವ.ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಮಾತನಾಡಿ, ಪಶು ವೈದ್ಯರ ನಿಸ್ವಾರ್ಥ ಸೇವೆಯಿಂದ ಈ ಭಾಗದ ಜನರು ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ಅವರ ಕೊಡುಗೆಯನ್ನು ಜನ ಸದಾ ಸ್ಮರಿಸುವಂತಿದೆ ಎಂದರು.ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಉಪನಿರ್ದೇಶಕ ಡಾ. ಸುಬ್ರಾಯ ಭಟ್ಟ, ಸರ್ವೋದಯ ಪ್ರೌಢಶಾಲೆ ಅಧ್ಯಕ್ಷ ಡಿ. ಶಂಕರ್ ಭಟ್ಟ, ವಿಶ್ವದರ್ಶನ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ವಜ್ರಳ್ಳಿ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ ಮಾತನಾಡಿದರು.
ಸಮಾರಂಭದಲ್ಲಿ ಅನೇಕ ಸಂಘ ಸಂಸ್ಥೆಗಳು, ಹಾಲು ಉತ್ಪಾದನಾ ಘಟಕದವರು ಪಶುವೈದ್ಯ ಕೆ.ಜಿ. ಹೆಗಡೆ ಹಾಗೂ ಅವರ ಪತ್ನಿ ಶ್ಯಾಮಲಾ ಅವರನ್ನು ಸನ್ಮಾನಿಸಿ, ಗೌರವಿಸಿದರು. ಮಾವಿನಮನೆ ಸೇ.ಸ. ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ ಸ್ವಾಗತಿಸಿದರು. ಪತ್ರಕರ್ತ ದತ್ತಾತ್ರಯ ಕಣ್ಣಿಪಾಲ್ ನಿರ್ವಹಿಸಿದರು. ದತ್ತಾತ್ರಯ ಭಟ್ಟ ತಾರಗಾರ ವಂದಿಸಿದರು.