ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಕುಳಿತು ರಸ್ತೆಗೆ ಕಸ ಎಸೆದಿದ್ದನ್ನು ಪ್ರಶ್ನಿಸಿದ ಪ್ರಾಧ್ಯಾಪಕರೊಬ್ಬರ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಕುಳಿತು ರಸ್ತೆಗೆ ಕಸ ಎಸೆದಿದ್ದನ್ನು ಪ್ರಶ್ನಿಸಿದ ಪ್ರಾಧ್ಯಾಪಕರೊಬ್ಬರ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಕಾಲೇಜಿನ ಪ್ರಾಧ್ಯಾಪಕ ಅರಬಿಂದೋ ಗುಪ್ತಾ ಹಲ್ಲೆಗೆ ಒಳಗಾದವರು. ಏ.21ರಂದು ಮಧ್ಯಾಹ್ನ ಸುಮಾರು 3.30ಕ್ಕೆ ಜೆಎಚ್‌ಬಿಸಿಎಸ್‌ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆ ಸಂಬಂಧ ವಿಡಿಯೋ ಮಾಡಿ ಮಾತನಾಡಿರುವ ಪ್ರಾಧ್ಯಾಪಕ ಅರಬಿಂದೋ ಗುಪ್ತಾ, ಚಲಿಸುವ ಆಟೋದೊಳಗಿಂದ ರಸ್ತೆಗೆ ಕಸ ಎಸೆದ ಪರಿಣಾಮ ತನ್ನ ದ್ವಿಚಕ್ರ ವಾಹನ ಸ್ಕಿಡ್‌ ಆಗುವ ಸಾಧ್ಯತೆ ಇತ್ತು. ಹೀಗಾಗಿ ನಾನು ಪ್ರಶ್ನೆ ಮಾಡಿದೆ. ಅಷ್ಟಕ್ಕೆ ಮೂವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು ನಗರವನ್ನು ಸುರಕ್ಷಿತ ನಗರ ಎಂದು ಕರೆಯಲಾಗುತ್ತಿತ್ತು. ಇಂತವರು ನಗರದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಇಂತಹ ಗೂಂಡಾ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.