ಸಾರಾಂಶ
ಧಾರವಾಡ: ಹೊಸ ತಂತ್ರಜ್ಞಾನದ ಕುರಿತು ಪ್ರಾಧ್ಯಾಪಕರು ಹೆಚ್ಚಿನ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ. ಜಯಶ್ರೀ .ಎಸ್. ಹೇಳಿದರು.
ಕವಿವಿ ಗಣಿತಶಾಸ್ತ್ರ ವಿಭಾಗ ಪಾವಟೆ ಇನ್ಸ್ಟಿಟ್ಯೂಟ್ ಆಫ್ ಮೆಥ್ಯಾಮೆಟಿಕ್ಸ್ ಮತ್ತು ಬೆಂಗಳೂರಿನ ಕೋರೇಲ್ ಟೆಕ್ನಾಲಜೀಸ್ ಸಹಯೋಗದಲ್ಲಿ ನಾಲ್ಕು ದಿನಗಳ ಗಣಿತ ಪ್ರಾಧ್ಯಾಪಕರ ಪುನಶ್ಚೇತನ ಶಿಬಿರ ಮತ್ತು ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಹಲವಾರು ಸುಧಾರಿತ ತಂತ್ರಜ್ಞಾನವನ್ನು ಇಂದಿನ ವಿದ್ಯಾರ್ಥಿಗಳು ಅರಿಯುವುದು ಸೂಕ್ತ. ಗಣಿತ ವಿಜ್ಞಾನಿ ಪ್ರೊ. ಎಂ.ಎನ್. ಬುಜುರ್ಕೆ ಅವರಿಗೆ ಅರಿವೇ ಗುರು ಪ್ರಶಸ್ತಿ ನೀಡುತ್ತಿರುವುದು ಪ್ರಶಸ್ತಿಗೆ ಹೆಚ್ಚು ಮೆರುಗು ತಂದಿದೆ ಎಂದರು.
ಅರಿವು ಗುರು ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಗಣಿತ ವಿಜ್ಞಾನಿ ಪ್ರೊ. ಎಂ.ಎನ್. ಬುಜುರ್ಕೆ ಮಾತನಾಡಿ, ನನ್ನ ಸೇವೆ ಪರಿಗಣಿಸಿ ಈ ಅರಿವೇ ಗುರು ಪ್ರಶಸ್ತಿ ನೀಡಿರುವುದು ಸಂಗತಿ. ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಂಪ್ಯೂಟರ್ ಕೋರ್ಸುಗಳನ್ನು ಪರಿಚಯಿಸುವಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ತಾನಾಗಿ ಒಲಿದು ಬರುತ್ತದೆ ಎಂದರು.ಕವಿವಿ ವಿಜ್ಞಾನ ತಂತ್ರಜ್ಞಾನ ನಿಖಾಯದ ಡೀನ್ ಪ್ರೊ. ಎ.ಎ. ಮೂಲಿಮನಿ ಮಾತನಾಡಿ, ಪ್ರೊ. ಎಂ.ಎನ್. ಬುಜರ್ಕೆ ಅವರು ಸರಳ ಸಜ್ಜನಿಯಕೆ ಗಣಿತ ವಿಜ್ಞಾನಿ ಆಗಿದ್ದು ಅವರು ಗಣಿತ ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ಸಿ. ಶಿರಾಳಶೆಟ್ಟಿ ಮಾತನಾಡಿ, ಸುಧಾರಿತ ತಂತ್ರಜ್ಞಾನ ಅರಿಯವುದರಿಂದ ಹೆಚ್ಚು ಉದ್ಯೋಗ ಅವಕಾಶಗಳನ್ನು ಪಡೆಯಲು ಸಾಧ್ಯ. ಶಿಬಿರದಲ್ಲಿ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ ಎಂದರು.ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ, ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಜಂಗಮಶಟ್ಟಿ ಪ್ರಸಾರಾಂಗ ನಿರ್ದೇಶಕ ಎ.ಎಂ. ಕಡಕೋಳ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಸಿ. ಶಿರಾಳಶೆಟ್ಟಿ, ಪ್ರಾಧ್ಯಾಪಕ ಪ್ರೊ. ಪಿ.ಜಿ. ಪಾಟೀಲ, ಪ್ರೊ. ಎಚ್.ಎಸ್. ರಾಮನೆ, ಕವಿವಿ ಪ್ರಸಾರಾಂಗ ನಿರ್ದೇಶಕ ಡಾ. ಎ.ಎಂ. ಕಡಕೋಳ ಸೇರಿದಂತೆ ಹಲವರಿದ್ದರು.