ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಶಿವರಾತ್ರಿ ಅಂಗವಾಗಿ ಬುಧವಾರ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜೆ, ಅಭಿಷೇಕ, ಪ್ರಸಾದ ವಿನಿಯೋಗ ನೆರವೇರಿತು.ಶಿವರಾತ್ರಿ ಭಾಗವಾಗಿ ನಿನ್ನೆಯೇ ಚಕ್ರಪೂಜೆ, ಭಜನೆ, ಪಂಚರತ್ನ ಕೀರ್ತನಗಳ ಗಾಯನ ನೆರವೇರಿತ್ತು.ಬುಧವಾರ ಬೆಳಗ್ಗೆ 6 ಗಂಟೆಗೆ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಹಾರುದ್ರ ಹೋಮ ನೆರವೇರಿಸಿದರು. ನಂತರ ಪ್ರಯಾಗದ ಕುಂಭಮೇಳ ತೀರ್ಥದಿಂದ ಕೂಡಿದ ಸಪ್ತರ್ಷಿ ಸರೋವರದಲ್ಲಿ ಉಚಿತ ತೀರ್ಥಸ್ನಾನದ ವ್ಯವಸ್ಥೆ ಮಾಡಲಾಗಿತ್ತು.ನಂತರ ಶ್ರೀಚಕ್ರಪೂಜೆ, ಮಹಾರುದ್ರ ಪೂರ್ಣಾಹುತಿ ನೆರವೇರಿಸಿದ ಬಳಿಕ ಭಕ್ತರಿಂದ ಶಿವಲಿಂಗಕ್ಕೆ ಮಹಾರುದ್ರಾಭಿಷೇಕ ಆಯೋಜಿಸಲಾಗಿತ್ತು. ಆಶ್ರಮಕ್ಕೆ ಆಗಮಿಸಿದ ಸಾವಿರಾರು ಮಂದಿ ಭಕ್ತರು ಅಭಿಷೇಕ ನೆರವೇರಿಸಿ ಪುನೀತ ಭಾವ ತಾಳಿದರು.ಸಂಜೆ ಮೂಲಿಕೇಶ್ವರ ಸ್ವಾಮಿಗೆ ಪೂಜೆ, ಶ್ರೀಗಳಿಂದ ಶಿವಲಿಂಗಕ್ಕೆ ರುದ್ರಾಭಿಷೇಕ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್. ಶುಭಲಕ್ಷ್ಮೀ ಮತ್ತು ಎಸ್. ಸೋರ್ನಲತ ಮತ್ತು ತಂಡದಿಂದ ಕರ್ನಾಟಕ ಸಂಗೀತ ದ್ವಂದ್ವಗಾಯನ ನಡೆಯಿತು. ರಾತ್ರಿ ಕರ್ನಾಟಕ ಸಂಗೀತ ಗಾಯನ, ಮತ್ತೆ ತಡರಾತ್ರಿ ಶ್ರೀಗಳು ರುದ್ರಾಭಿಷೇಕ ನೆರವೇರಿಸಿದರು.ಫೆ. 27 ರಂದು ಬೆಳಗ್ಗೆ 3 ಗಂಟೆಗೆ ಶ್ರೀಗಳಿಂದ ಶಿವಭಜನೆ, ಸಚ್ಚಿದಾನಂದ ಶಿವ ಭಜನೆ, ದಿವ್ಯನಾಮ ಸಂಕೀರ್ತನೆ ಮತ್ತು ಉಪನ್ಯಾಸ, ಸಂಜೆ 6 ಗಂಟೆಗೆ ಶಿವಲಿಂಗಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.