ಮರೆಯಲಾಗದ ಮಹನೀಯರಿಗೆ ಗೀತನಮನ..

| Published : Mar 29 2025, 12:38 AM IST

ಸಾರಾಂಶ

ನಗರದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಗಳಿಗೆ ಐಪಿಆರ್‌ ಎಸ್‌ ಹೆಸರಿನಲ್ಲಿ ಬೆದರಿಸುತ್ತಿದ್ದ ಖಾಸಗಿ ಸಂಸ್ಥೆಗೆ ನೋಟಿಸ್‌ ನೀಡಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಜಿಲ್ಲಾ ಘಟಕ ಮತ್ತು ವಿ.ವಿ ಕ್ರಿಯೇಷನ್ಸ್ ಸಂಯುಕ್ತವಾಗಿ ನಗರದ ಜೆಎಲ್ ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಅನಂತಗಾನ ಅಶ್ವತ್ಥಯಾನ- ಮರೆಯಲಾಗದ ಮಹನೀಯರಿಗೆ ಗೀತನಮನ ಕಾರ್ಯಕ್ರಮ ಆಯೋಜಿಸಿತ್ತು.

ಮರೆಯಲಾಗದ ಮಹನೀಯರು ಮಾಲಿಕೆ ಅಡಿಯಲ್ಲಿ ಸಿ. ಅಶ್ವತ್ಥ್ ಮತ್ತು ಮೈಸೂರು ಅನಂತಸ್ವಾಮಿ ಅವರ ಹಾಡುಗಳ ಗಾಯನ ನೈಜ ಸಂಗೀತದೊಂದಿಗೆ ಗೀತನಮನ ಸಲ್ಲಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಕಾರ್ಯಕ್ರಮ ಉದ್ಘಾಟಿಸಿದರು. ಸಿ. ಅಶ್ವತ್ಥ್‌ ಅವರನ್ನು ಕುರಿತು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಮೈಸೂರು ಅನಂತಸ್ವಾಮಿ ಕುರಿತು ಕವಿ ಜಯಪ್ಪ ಹೊನ್ನಾಳಿ ನುಡಿನಮನ ಸಲ್ಲಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅತಿಥಿಯಾಗಿದ್ದರು. ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಸ್ವಾಗತಿಸಿದರು.

ವಿ.ವಿ. ಕ್ರಿಯೇಷನ್ಸ್ ಅಧ್ಯಕ್ಷೆ ವಿಮಲಾ ವೀರೇಶ್ ಮಾತನಾಡಿದರು.

ನಿತಿನ್ ರಾಜಾರಾಂ ಶಾಸ್ತ್ರೀಯ ನೇತೃತ್ವದಲ್ಲಿ ಎ.ಡಿ. ಶ್ರೀನಿವಾಸ್, ಇಂದ್ರಾಣಿ ಅನಂತರಾಮ್, ಹಂಸಿನಿ ಭಾವಗೀತೆಗಳನ್ನು ಹಾಡಿದರು, ಇವರಿಗೆ ಶ್ರೀನಿವಾಸ್- ಕೀಬೋರ್ಡ್, ವೀರೇಂದ್ರ ಪ್ರಸಾದ್- ಮ್ಯಾಂಡೋಲಿನ್, ಪುನೀತ್- ಕೊಳಲು, ಭೀಮಾಶಂಕರ್ ಮತ್ತು ಇಂದು ಶೇಖರ್ ತಬಲ ಮತ್ತು ರಾಘವೇಂದ್ರ ಪ್ರಸಾದ್ ರಿದಂ ಪ್ಯಾಡ್ ನಲ್ಲಿ ಸಾಥ್ ನೀಡಿದರು.ಐಪಿಆರ್‌ಎಸ್‌ ಹೆಸರಿನಲ್ಲಿ ಬೆದರಿಸುತ್ತಿದ್ದ ಖಾಸಗಿ ಸಂಸ್ಥೆಗೆ ನೋಟಿಸ್‌

ಐಪಿಆರ್‌ಎಸ್‌ ಹೆಸರಿನಲ್ಲಿ

ನಗರದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಗಳಿಗೆ ಐಪಿಆರ್‌ ಎಸ್‌ ಹೆಸರಿನಲ್ಲಿ ಬೆದರಿಸುತ್ತಿದ್ದ ಖಾಸಗಿ ಸಂಸ್ಥೆಗೆ ನೋಟಿಸ್‌ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ ಹೇಳಿದರು.

ನಾದಬ್ರಹ್ಮ ಸಭಾದಲ್ಲಿ ನಡೆದ ಅನಂತಗಾನ- ಅಶ್ವತ್ಥಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದೊಳಗಿನ ಯಾವುದೇ ಸಂಸ್ಥೆಯು ಕನ್ನಡದಲ್ಲಿಯೇ ವ್ಯವಹರಿಸಬೇಕು. ಆದರೆ ಆ ಸಂಸ್ಥೆ ಇಂಗ್ಲಿಷ್‌ ಭಾಷೆಯಲ್ಲಿ ಪತ್ರ ನೀಡಿತ್ತು. ಹೀಗಾಗಿ ಕನ್ನಡ ಭಾಷೆ ಬಳಸದ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ ನೀಡಲಾಗಿದೆ. ಇದಲ್ಲದೇ ರಾಜಧನ ವಸೂಲಿ ಮಾಡುವ ಬಗ್ಗೆ ನಿಮ್ಮಲ್ಲಿರುವ ದಾಖಲೆಗಳೊಂದಿಗೆ ಕಚೇರಿಗೆ ಖುದ್ದು ಹಾಜರಾಗಿ. ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಘ, ಸಂಸ್ಥೆಗಳು, ಸಭಾಮಂದಿರಗಳ ಸಭೆ ನಡೆಸಿ, ಮುಂದಿನ ಕ್ರಮ ವಹಿಸಲಾಗುವುದು ಎಂದು ಕೂಡ ನೋಟಿಸ್‌ ನೀಡಲಾಗಿದೆ. ಆದರೆ ಇವರೆಡಕ್ಕೂ ಈವರೆಗೆ ಉತ್ತರ ಬಂದಿಲ್ಲ ಎಂದರು.

ಆದ್ದರಿಂದ ಆ ಸಂಸ್ಥೆಯಿಂದ ಉತ್ತರ ಬರುವವರೆಗೆ ನಿರಾಂತಕವಾಗಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಅವರು ಅಭಯ ನೀಡಿದರು.

ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾಗಿ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ನಾಗರಾಜ ವಿ. ಬೈರಿ ಅವರನ್ನು ದಣಿವರಿಯದ ಸಂಘಟಕ ಎಂದು ಬಣ್ಣಿಸಿದರು.