೧೫ ರಂದು ಸಿಎಂ ಮನೆ ಕಡೆಗೆ ನಡಿಗೆ

| Published : Feb 11 2024, 01:47 AM IST

ಸಾರಾಂಶ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಆರನೇ ಗ್ಯಾರಂಟಿಯಾದ ಗುತ್ತಿಗೆ ನೌಕರರ ಕಾಯಂ ಮಾಡದೇ ಇರುವುದನ್ನು ಖಂಡಿಸಿ ಫೆ.೧೫ ರಂದು ಹೊರಗುತ್ತಿಗೆ ನೌಕರರು ಹಾಗೂ ಪೌರ ಕಾರ್ಮಿಕರ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಆರನೇ ಗ್ಯಾರಂಟಿಯಾದ ಗುತ್ತಿಗೆ ನೌಕರರ ಕಾಯಂ ಮಾಡದೇ ಇರುವುದನ್ನು ಖಂಡಿಸಿ ಫೆ.೧೫ ರಂದು ಹೊರಗುತ್ತಿಗೆ ನೌಕರರು ಹಾಗೂ ಪೌರ ಕಾರ್ಮಿಕರ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಹೇಳಿದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೀರುಗಂಟಿಗಳು ಲೋಡರ್ಸ್ ಕ್ಲೀನರ್ಸ್, ಹೆಲ್ಪರ್ಸ್ ಯೂಜಿಡಿ ಕಾರ್ಮಿಕರು ಸೇರಿದಂತೆ ಎಲ್ಲ ಬಗೆಯ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸುವಂತೆ ಹಾಗೂ ಪೌರ ಕಾರ್ಮಿಕರ ಬಾಕಿ ಹುದ್ದೆಗಳ ನೇಮಕಾತಿಗೆ ಆ೧೩ ರಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ತರಲು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಅಗತ್ಯಕ್ಕನುಗುಣವಾಗಿ ಪೌರಚಾಲಕ ಹುದ್ದೆಗಳನ್ನು ಸೃಷ್ಟಿಸಬೇಕು. ಸಂಕಷ್ಟ ಭತ್ಯೆಯನ್ನು ನೇರಪಾವತಿ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೂ ವಿಸ್ತರಿಸಬೇಕು. ಬಾಕಿ ಇರುವ ಪೌರಕಾರ್ಮಿಕ ಹುದ್ದೆಗಳ ಭರ್ತಿ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಚುನಾವಣಾ ಪ್ರಣಾಳಿಕೆಯಲ್ಲಿ ೨೫ ಸಾವಿರ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡುತ್ತೇನೆ ಎಂದು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿತ್ತು, ಅಧಿಕಾರ ಬಂದು ಇಷ್ಟು ದಿನವಾದರೂ ಐದು ಗ್ಯಾರಂಟಿ ಪೂರೈಸಿದ್ದೇವೆ ಎಂಬುದನ್ನು ಹೇಳಿಕೊಂಡು ಆರನೇ ಗ್ಯಾರಂಟಿ ಮರೆತಿದ್ದಾರೆ, ಇದನ್ನು ಪೂರೈಸಿ ನಂತರ ಹೇಳಿಕೊಂಡು ನಾಯಕರು ತಿರುಗಾಡಲಿ, ಐದು ಸಾವಿರ ಮಂದಿಯನ್ನಾದರೂ ಕಾಯಂ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ಎಂ.ಮಹದೇವು, ಎಂ.ಗಣೇಶ, ರಾಜೇಶ್ ಇದ್ದರು.