ಅಮೆರಿಕಾದಲ್ಲಿ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮ ಹಿನ್ನೆಲೆ ದಿಶಾ ಸಭೆಯಲ್ಲಿ ಭಾಗವಹಿಸಲ್ಲ: ಚಲುವರಾಯಸ್ವಾಮಿ

| Published : Aug 25 2024, 01:52 AM IST

ಅಮೆರಿಕಾದಲ್ಲಿ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮ ಹಿನ್ನೆಲೆ ದಿಶಾ ಸಭೆಯಲ್ಲಿ ಭಾಗವಹಿಸಲ್ಲ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕಾದ ಚಿಕಾಗೋ ಸಮೀಪದ ಲಿಮೋನಿಯಾ ಎಂಬ ಸ್ಥಳದಲ್ಲಿ ಕೃಷಿ ಇಲಾಖೆ ವತಿಯಿಂದ ಕಾರ್ಯಕ್ರಮ ನಡೆಯುತ್ತಿರುವುದರಿಂದ ನಾನೂ ಸೇರಿದಂತೆ ಕೃಷಿ ಇಲಾಖೆ ಕಾರ್ಯದರ್ಶಿ ಮತ್ತು ನಿಗಮದ ಅಧ್ಯಕ್ಷರು ಶನಿವಾರ ರಾತ್ರಿ ಅಮೆರಿಕಾ ಪ್ರವಾಸ ಕೈಗೊಂಡಿದ್ದೇವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಅಮೆರಿಕಾದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ನಿಗಧಿಯಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯುವ ದಿಶಾ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕಾದ ಚಿಕಾಗೋ ಸಮೀಪದ ಲಿಮೋನಿಯಾ ಎಂಬ ಸ್ಥಳದಲ್ಲಿ ಕೃಷಿ ಇಲಾಖೆ ವತಿಯಿಂದ ಕಾರ್ಯಕ್ರಮ ನಡೆಯುತ್ತಿರುವುದರಿಂದ ನಾನೂ ಸೇರಿದಂತೆ ಕೃಷಿ ಇಲಾಖೆ ಕಾರ್ಯದರ್ಶಿ ಮತ್ತು ನಿಗಮದ ಅಧ್ಯಕ್ಷರು ಶನಿವಾರ ರಾತ್ರಿ ಅಮೆರಿಕಾ ಪ್ರವಾಸ ಕೈಗೊಂಡಿದ್ದೇವೆ ಎಂದರು.

ಇಲಾಖೆ ಕಾರ್ಯಕ್ರಮ ಮುಗಿದ ನಂತರ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ಮತ್ತು ಕನ್ನಡಿಗರು ಪ್ರತಿ ವರ್ಷ ಆಯೋಜಿಸುವ ಅಕ್ಕ ಸಮ್ಮೇಳನಕ್ಕೆ ನನನ್ನು ಆಹ್ವಾನಿಸಿರುವುದರಿಂದ ಸೆ.1ರಿಂದ 3 ದಿನಗಳ ಕಾಲ ಸಮ್ಮೇಳನದಲ್ಲಿ ಪಾಲ್ಗೊಂಡು ವಾಪಸ್ ಬರುತ್ತೇನೆ ಎಂದು ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯ ಸಣ್ಣ ನೀರಾವರಿ ಉಪ ವಿಭಾಗದ ಕಚೇರಿಯನ್ನು ಸಿಬ್ಬಂದಿ ಸಹಿತ ತಾಲೂಕಿಗೆ ವರ್ಗಾಯಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ಸಿ.ಎಸ್. ಪುಟ್ಟರಾಜು ಅವರು ಸಣ್ಣ ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ಆ ಉಪ ವಿಭಾಗದ ಕಚೇರಿಯನ್ನು ಚಿನಕುರಳಿಗೆ ತಂದು ಸಣ್ಣ ನೀರಾವರಿಗೆ ಸಂಬಂಧಿಸಿದಂತೆ ಒಂದಷ್ಟು ಕೆಲಸ ಮಾಡಿದ್ದರು ಎಂದರು.

ಆ ನಂತರ ಕೆ.ಸಿ.ನಾರಾಯಣಗೌಡರು ಸಚಿವರಾಗಿದ್ದ ಅವಧಿಯಲ್ಲಿ ಬೂಕನಕೆರೆಗೆ ಹಾಕಿಕೊಂಡಿದ್ದರು. ತಾಲೂಕು ಕೇಂದ್ರದಲ್ಲಿ ಅಥವಾ ಉಪ ವಿಭಾಗ ಮಟ್ಟದಲ್ಲಿರಬೇಕಾದ ಕಚೇರಿ ಹೋಬಳಿ ಅಥವಾ ಗ್ರಾಪಂ ಕೇಂದ್ರದಲ್ಲಿರುವುದು ಸೂಕ್ತವಲ್ಲ ಎಂದರು.

ಉಪ ವಿಭಾಗದ ಕಚೇರಿಗೆ ಪಾಂಡವಪುರ, ನಾಗಮಂಗಲ ಹಾಗೂ ಕೆ.ಆರ್.ಪೇಟೆ ಈ 3 ತಾಲೂಕುಗಳು ಒಳಪಡುತ್ತವೆ. ಹಾಗಾಗಿ ತಾಲೂಕು ಕೇಂದ್ರದಲ್ಲಿರಬೇಕೆಂಬ ಉದ್ದೇಶದಿಂದ ಕಾನೂನಾತ್ಮಕವಾಗಿ ಅಧಿಕಾರಿಗಳು ಸಣ್ಣ ನೀರಾವರಿ ಉಪ ವಿಭಾಗದ ಕಚೇರಿಯನ್ನು ನಾಗಮಂಗಲಕ್ಕೆ ಸ್ಥಳಾಂತರಿಸಿದ್ದಾರೆ ಎಂದರು.

ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲಿನಿಂದ ಏತ ನೀರಾವರಿ ಮೂಲಕ ತಾಲೂಕಿನ ಹೊಣಕೆರೆ, ದೇವಲಾಪುರ ಹಾಗೂ ಕಸಬಾ ಹೋಬಳಿಯ 70ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ 700 ಕೋಟಿ ವೆಚ್ಚದ ಬೃಹತ್ ಯೋಜನೆ ರೂಪಿಸಲು ಸಂಬಂಧಿಸಿದ ಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅದರ ಡಿಪಿಆರ್ ಕೂಡ ಸಿದ್ದವಾಗಿ ಈಗಾಗಲೇ ಕಳೆದ ಐದಾರು ತಿಂಗಳಿಂದ ಈ ಯೋಜನೆಯಿಂದ ನೀರು ಪೂರೈಸಲಾಗುತ್ತಿದೆ. ಹಾಗಾಗಿ ಆಡಳಿತಾತ್ಮಕವಾಗಿ ಕಚೇರಿ ಸ್ಥಳಾಂತರವಾಗಿದೆ ಎಂದು ಹೇಳಿದರು.