ಇದು ಸಾಧನಾ ಸಮಾವೇಶವೇ ವಿನಃ ಶಕ್ತಿ ಸಮಾವೇಶ ಅಲ್ಲ

| Published : Jul 19 2025, 01:00 AM IST

ಇದು ಸಾಧನಾ ಸಮಾವೇಶವೇ ವಿನಃ ಶಕ್ತಿ ಸಮಾವೇಶ ಅಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ನಾವು ಸಾವಿರಾರು ಕೋಟಿ ಹಣವನ್ನ ಒಂದೇ ನಗರಕ್ಕೆ ಮಂಜೂರು ಮಾಡಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರುಸುಳ್ಳು ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಉತ್ತರ ನೀಡಲು ನಾವು ಸಮಾವೇಶ ಮಾಡುತ್ತಿದ್ದೇವೆ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧನ ಸಮಾವೇಶಕ್ಕೆ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು.ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ನಾವು ಸಾವಿರಾರು ಕೋಟಿ ಹಣವನ್ನ ಒಂದೇ ನಗರಕ್ಕೆ ಮಂಜೂರು ಮಾಡಿದ್ದೇವೆ. ಇದನ್ನು ಜನರಿಗೆ ಹೇಳಲು ಸಮಾವೇಶ ಮಾಡುತ್ತಿದ್ದೇವೆ. ಇದು ಸಾಧನ ಸಮಾವೇಶ ಹೊರತು ಶಕ್ತಿ ಸಮಾವೇಶ ಅಲ್ಲ ಎಂದು ಸ್ಪಷ್ಟಪಡಿಸಿದರು.ಬಿಜೆಪಿಯು ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಶನಿವಾರ ಮೈಸೂರಿನಲ್ಲಿ ನಡೆಯುತ್ತಿರುವ ಸಮಾವೇಶ, ಕಾಂಗ್ರೆಸ್ ಸರ್ಕಾರ ಮಾಡಿರುವ ಜನಪರ ಕೆಲಸವನ್ನು ಜನರ ಮುಂದಿಡುವ ಕಾರ್ಯಕ್ರಮವಾಗಿದೆ. ಸುಮಾರು 2600 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದ್ದು, ಬಿಜೆಪಿಯವರು ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು. ನಗರ ಪ್ರದೇಶದ ಮತದಾರರಲ್ಲಿ ಕಾಂಗ್ರೆಸ್ ಪರವಾದ ಒಲವು ಕಡಿಮೆ ಆಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ ಎಂದರು. ಕೃಷ್ಣಾ ನದಿ ನೀರು ಹಂಚಿಕೆ- ಕೇಂದ್ರವಿನ್ನೂ ಅಧಿಸೂಚನೆ ಹೊರಡಿಸಿಲ್ಲಕೃಷ್ಣಾ ಜಲವಿವಾದ ನ್ಯಾಯಾಧೀಕರಣದ ಅವಧಿಯನ್ನು ವಿಸ್ತರಿಸಿರುವ ಬಗ್ಗೆ ಯಾವುದೇ ವಿರೋಧವಿಲ್ಲ. ಆದರೆ, ನೀರು ಹಂಚಿಕೆಯ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ಅಧಿಸೂಚನೆ ಹೊರಡಿಸಿಲ್ಲ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ನಡುವೆ ಅಂತರ ರಾಜ್ಯ ಜಲ ವಿವಾದವಿದ್ದು, ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ನೀರು ಹಂಚಿಕೆಯ ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ. ಮತ್ತು ತೀರ್ಪಿನನ್ವಯ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಯಾವುದೇ ನಷ್ಟವೂ ಆಗುವುದಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು 524.26 ಮೀ ಗಳಿಗೆ ಹೆಚ್ಚಿಸಲು ಅನುಮತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು. ಬಿಜೆಪಿಗೆ ಸವಾಲುದಲಿತರಿಗೆ ನಾಯಕತ್ವ ವಿಚಾರ‌ಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮಾತ್ರ ಸಂವಿಧಾನದ ಆಶಾಯ ಎತ್ತಿ ಹಿಡಿದು ದಲಿತರಿಗೆ ನ್ಯಾಯ ಕೊಟ್ಟಿದೆ. ಖರ್ಗೆ ನಮ್ಮ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈಗ ನರೇಂದ್ರ ಮೋದಿ ಬದಲು ಬೇರೊಬ್ಬ ದಲಿತರನ್ನ ಪ್ರಧಾನ ಮಂತ್ರಿ ಮಾಡಲು ಹೇಳಲಿ. ವಿಜಯೇಂದ್ರ‌ ಅವರೇ ತಮ್ಮ ಅಧ್ಯಕ್ಷ ಸ್ಥಾನವನ್ನ ದಲಿತರಿಗೆ ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು.----ಕೋಟ್...ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ವಿಚಾರ ನನ್ನ ಗಮನಕ್ಕೂ ಬಂದಿದೆ. ಇದೊಂದು ಹುಸಿ ಬಾಂಬ್ ಕರೆ ಇರಬಹುದು ಅಂತಾ ಪರಿಶೀಲನೆ ನಡೆಯುತ್ತಿದೆ. ಹುಸಿ ಬಾಂಬ್ ಕರೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ. ಇದನ್ನು ತಡೆಗಟ್ಟಲು ನೂತನ ಕಾನೂನು ಜಾರಿ ಮಾಡುತ್ತೇವೆ. ಜೊತೆಗೆ ಸುಳ್ಳು ಹೇಳಿಕೆ ಪ್ರಚೋದನಾ ಭಾಷಣ ತಡೆಗೂ ಕಾನೂನು ರೂಪಿಸುತ್ತೇವೆ.- ಸಿದ್ದರಾಮಯ್ಯ, ಮುಖ್ಯಮಂತ್ರಿ