ಶಿಕ್ಷಣದಿಂದ ಮಾತ್ರ ಏಳಿಗೆ, ಬದಲಾವಣೆ ಸಾಧ್ಯ: ವಿನಯ್

| Published : Mar 26 2025, 01:35 AM IST

ಶಿಕ್ಷಣದಿಂದ ಮಾತ್ರ ಏಳಿಗೆ, ಬದಲಾವಣೆ ಸಾಧ್ಯ: ವಿನಯ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ಕನ್ನಡ ಶಾಲೆಗಳು ಜೀವಂತಿಕೆಯಿಂದ ಇರಬೇಕು. ಆದರೆ, ರಾಜ್ಯದಲ್ಲಿ ಕನ್ನಡ ಶಾಲೆಗಳು ಸತ್ತುಹೋಗುತ್ತಿವೆ. ಇದರಿಂದ ಭಾಷೆಯೂ ಸತ್ತುಹೋಗುತ್ತಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯಕುಮಾರ ಆತಂಕ ವ್ಯಕ್ತಪಡಿಸಿದ್ದಾರೆ.

- ನ್ಯಾಮತಿಯಲ್ಲಿ ಕನ್ನಡ ಧ್ವಜಸ್ತಂಭ ಉದ್ಘಾಟನೆ । ಕನ್ನಡ ನಾಡು ರಕ್ಷಣಾ ವೇದಿಕೆ ವಾರ್ಷಿಕೋತ್ಸವ- ಪೌರಕಾರ್ಮಿಕರಿಗೆ ಸನ್ಮಾನ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ಕನ್ನಡ ಶಾಲೆಗಳು ಜೀವಂತಿಕೆಯಿಂದ ಇರಬೇಕು. ಆದರೆ, ರಾಜ್ಯದಲ್ಲಿ ಕನ್ನಡ ಶಾಲೆಗಳು ಸತ್ತುಹೋಗುತ್ತಿವೆ. ಇದರಿಂದ ಭಾಷೆಯೂ ಸತ್ತುಹೋಗುತ್ತಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯಕುಮಾರ ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯ ನ್ಯಾಮತಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ಧ್ವಜಸ್ತಂಭ ಉದ್ಘಾಟನೆ, ಕನ್ನಡ ನಾಡು ರಕ್ಷಣಾ ವೇದಿಕೆ 1ನೇ ವಾರ್ಷಿಕೋತ್ಸವ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳ ಪರಿಸ್ಥಿತಿ ತುಂಬಾನೇ ಕೆಟ್ಟದ್ದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಹೆಚ್ಚಿನ ಮಕ್ಕಳು ಕಡುಬಡವರು, ಪರಿಶಿಷ್ಟರು, ಹಿಂದುಳಿದವರಾಗಿರುತ್ತಾರೆ. ಹಣ ಇಲ್ಲವೆಂಬ ಕಾರಣಕ್ಕೆ ಎಷ್ಟೋ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಉನ್ನತ ಶಿಕ್ಷಣ ಕೊಡಿಸಿದರೆ ಮಕ್ಕಳ ಭವಿಷ್ಯವೂ ಉಜ್ವಲ ಆಗುತ್ತದೆ. ಶಿಕ್ಷಣದಿಂದ ಮಾತ್ರವೇ ಜೀವನದಲ್ಲಿ ಏಳಿಗೆ, ಬದಲಾವಣೆ ಸಾಧ್ಯ ಎಂದರು.

ಹಳ್ಳಿಗಳಲ್ಲೂ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕೆಂಬುದು ನನ್ನ ಉದ್ದೇಶ, ಗುರಿ. ಇದಕ್ಕಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇನೆ. ಬಡವರ ಮಕ್ಕಳು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗಬೇಕು. ಜಿಲ್ಲಾಡಳಿತ, ತಾಲೂಕು ಆಡಳಿತ ನಿಯಂತ್ರಿಸುವಂತ ಅಧಿಕಾರಿಗಳಾಗಬೇಕು. ಬಡವರ ಮಕ್ಕಳು ಹಣ ಇಲ್ಲ ಎಂಬ ಏಕೈಕ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬಾರದು. ಪೋಷಕರು ಆರ್ಥಿಕ ಪರಿಸ್ಥಿತಿಯಿಂದ ಶಾಲೆ ಬಿಡಿಸಿ, ಕೆಲಸಕ್ಕೆ ಸೇರಿಸಬಾರದು ಎಂದು ತಿಳಿಸಿದರು.

ಪೌರ ಕಾರ್ಮಿಕರು ಯಾವುದೇ ಊರಿನ ಆತ್ಮಸಾಕ್ಷಿಗಳಿದ್ದಂತೆ. ಕೇವಲ ಸ್ವಚ್ಛತಾ ಕಾರ್ಯ ಮಾತ್ರ ಮಾಡುವುದಿಲ್ಲ. ನಮ್ಮೆಲ್ಲರ ಆರೋಗ್ಯವನ್ನೂ ಕಾಪಾಡುತ್ತಾರೆ. ಪೌರ ಕಾರ್ಮಿಕರು ಒಂದು ವಾರ ಸೇವೆ ನೀಡದಿದ್ದರೆ ಇಡೀ ಊರೇ ಗಬ್ಬೆದ್ದು ಹೋಗುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ ಪೌರ ಕಾರ್ಮಿಕರು ಇಲ್ಲವೆಂದರೆ ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. ಅಲ್ಲಿ ವಾಸಿಸುವವರು ಬೆಂಗಳೂರನ್ನೇ ಖಾಲಿ ಮಾಡಬೇಕಾಗುತ್ತದೆ. ಯಾರಿಗಾದರೂ ಹೆಚ್ಚಿನ ಗೌರವ ನೀಡಬೇಕೆಂದರೆ ಅದು ಪೌರಕಾರ್ಮಿಕರಿಗೆ ಎಂದು ಅವರು ಪೌರ ಕಾರ್ಮಿಕರ ಸೇವೆ ಸ್ಮರಿಸಿದರು.

ದಾವಣಗೆರೆ ಲೋಕಸಭೆ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸಿದ್ದೆ. 8 ಕ್ಷೇತ್ರದಲ್ಲಿ 2 ಸಾವಿರ ಹಳ್ಳಿ ಸಂಚರಿಸಲಾಗಲಿಲ್ಲ. ಆದರೆ, ಬಹುತೇಕ ಜನರನ್ನು ತಲುಪುವ ಕೆಲಸ ಮಾಡಿದ್ದೆ. ಸುರಹೊನ್ನೆಯಲ್ಲಿ ಎರಡ್ಮೂರು ರ್ಯಾಲಿ ಮಾಡಿದ್ದೆವು. ಹೆಚ್ಚಿನ ಪರಿಚಯ ಮುಂದಿನ ದಿನಗಳಲ್ಲಿ ಆಗುತ್ತದೆ. ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ನಾಡು ಕಂಡ ಅದ್ಭುತ ವ್ಯಕ್ತಿತ್ವದ ಮೇರುನಟ ದಿವಂಗತ ಪುನೀತ್ ರಾಜಕುಮಾರ ಸವಿನೆನಪಿನ ಕಾರ್ಯಕ್ರಮ ಮಾಡಿದ್ದು ಖುಷಿಯ ವಿಚಾರ. ಇಂತಹ ಜನೋಪಯೋಗಿ ಕಾರ್ಯಕ್ಕೆ ಕೈಲಾದ ಸಹಾಯ ಮಾಡುವೆ ಎಂದು ವಿನಯಕುಮಾರ ಭರವಸೆ ನೀಡಿದರು.

ರಾಂಪುರದ ಸದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಹಾಲಸ್ವಾಮೀಜಿ, ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆ ರಾಜ್ಯಾಧ್ಯಕ್ಷ ಪ್ರಸನ್ನಗೌಡ, ಕೆ.ಬಿ. ಚೆನ್ನಪ್ಪ, ಕಸಾಪ ತಾಲೂಕು ಅಧ್ಯಕ್ಷ ಡಿ.ಹಾಲಾರಾಧ್ಯ, ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜಪ್ಪ, ತಾಲೂಕು ಅಧ್ಯಕ್ಷ ಶಂಕರ ನಾಯ್ಕ, ಗೌರವಾಧ್ಯಕ್ಷ ಕತ್ತಿಗೆ ನಾಗರಾಜ, ಚೇತನಕುಮಾರ, ಜಗದೀಶ, ಗಣೇಶ, ವಿನಯ ಗೌಡ, ರವಿ, ವನಿತಾ, ಉಷಾ, ಮಂಜುಳಾ, ಅಂಬಿಕಾ, ಲಕ್ಷ್ಮೀ ಇತರರು ಇದ್ದರು.

- - - ಇನ್ ಸೈಟ್ಸ್ ಐಎಎಸ್ ಸಂಸ್ಥೆ ದೇಶದಲ್ಲೇ 3ನೇ ಐಎಎಸ್ ಕೋಚಿಂಗ್ ಸೆಂಟರ್ ಎಂಬ ಹೆಗ್ಗಳಿಕೆ ಹೊಂದಿದೆ. ಪೌರ ಕಾರ್ಮಿಕರ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು. ಅಂತಹವರಿಗೂ ಒಳ್ಳೆಯ ಶಿಕ್ಷಣ ಸಿಗಬೇಕು. ಸ್ವಚ್ಛತಾ ಕೆಲಸ ತಪ್ಪಲ್ಲ. ಇದು ನಿಮ್ಮ ಬದುಕಿಗೇ ಕೊನೆಯಾಗಬೇಕು. ಎಷ್ಟೇ ಕಷ್ಟವಾದರೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ. ನಮ್ಮ ಸಂಸ್ಥೆಯಿಂದ ಕಡುಬಡವರು, ಪೌರ ಕಾರ್ಮಿಕರ ಮಕ್ಕಳಿಗೆ ಉಚಿತ ಕೋಚಿಂಗ್ ನೀಡಲಾಗುವುದು. ನೀವು ಧೈರ್ಯ ಮಾಡಿ ಮುಂದೆ ಬರಬೇಕು

- ಜಿ.ಬಿ.ವಿನಯಕುಮಾರ, ಸಂಸ್ಥಾಪಕ, ಇನ್‌ಸೈಟ್ಸ್ ಐಎಎಸ್ ಅಕಾಡೆಮಿ

- - - -25ಕೆಡಿವಿಜಿ1.ಜೆಪಿಜಿ:

ನ್ಯಾಮತಿ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕನ್ನಡಧ್ವಜ ಸ್ತಂಭ ಉದ್ಘಾಟನೆ, ಕನ್ನಡನಾಡು ರಕ್ಷಣಾ ವೇದಿಕೆ 1ನೇ ವಾರ್ಷಿಕೋತ್ಸವ, ಪವರ್ ಸ್ಟಾರ್ ಪುನೀತ್ ರಾಜಕುಮಾರ ಸವಿನೆನಪಿಗಾಗಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.