ಸಾರಾಂಶ
ಶಿರಸಿ: ಬದುಕಿನಲ್ಲಿ ಏಳ್ಗೆಯನ್ನು ಕಾಣಬೇಕೆಂದರೆ ಸತತ ಪರಿಶ್ರಮವಿರಬೇಕು. ಅದಕ್ಕೆ ಶಿಸ್ತು ಹಾಗೂ ಸಮಯಪಾಲನೆ ಪೂರಕವಾಗಿರುತ್ತದೆ. ವಿದ್ಯಾರ್ಥಿಗಳು ಇದನ್ನು ಅರಿತು ಬಾಲ್ಯದಿಂದಲೇ ಅಳವಡಿಸಿಕೊಂಡರೆ ಸಾಧನೆ ಸಾಧ್ಯ ಎಂದು ನೆಹರು ಸ್ಮಾರಕ ಶಿಕ್ಷಣ ಸಮಿತಿಯ ಅಧ್ಯಕ್ಷ ಶ್ರೀಪಾದ ರಾಯ್ಸದ್ ವಡ್ಡಿನಕೊಪ್ಪ ತಿಳಿಸಿದರು.ತಾಲೂಕಿನ ಓಣಿಕೇರಿಯ ನೆಹರು ಸ್ಮಾರಕ ಶಿಕ್ಷಣ ಸಮಿತಿಯ ನೆಹರು ಪ್ರೌಢಶಾಲೆಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಚೈತನ್ಯ ಕಾಲೇಜಿನ ಅಧ್ಯಕ್ಷ ಲೋಕೇಶ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕೆಂದರು. ಜವಾಹರ ಹಸ್ತಪತ್ರಿಕೆ ಅನಾವರಣಗೊಳಿಸಿ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಎಲ್.ಆರ್. ಭಟ್ಟ ಮಾತನಾಡಿ, ಗುರು ಶಿಷ್ಯರ ಸಂಬಂಧ ಪವಿತ್ರವೆಂದು ಹೇಳಿದರು.ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ನಳಿನಿ ಭಟ್ಟ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತ ಬಂದ ನೆಹರು ಪ್ರೌಢಶಾಲೆಯ ಸಾಧನೆಯನ್ನು ಶ್ಲಾಘಿಸಿ ಕನ್ನಡ ಉಳಿವಿಗೆ ಕೋರಿದರು.ಭರತನಾಟ್ಯ ಕಲಾವಿದೆ ಡಾ. ಸಹನಾ ಭಟ್ಟ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿಯೂ ಅಂದವಾಗಿ ಮೂಡಿಬಂದ ಹಸ್ತಪತ್ರಿಕೆಯ ಹಿಂದೆ ಶಿಕ್ಷಕರ ಹಾಗೂ ಮಕ್ಕಳ ಪರಿಶ್ರಮ ಎದ್ದು ಕಾಣುತ್ತದೆ ಎಂದರು. ವೇದಿಕೆಯಲ್ಲಿ ನೆಹರು ಸ್ಮಾರಕ ಶಿಕ್ಷಣ ಸಮಿತಿಯ ಉಪಾದ್ಯಕ್ಷ ಚೆನ್ನಪ್ಪ ನಾಯ್ಕ, ಕೋಶಾಧ್ಯಕ್ಷ ಪಿ.ಎಸ್. ಹೆಗಡೆ, ಕಾರ್ಯದರ್ಶಿ ಶ್ರೀಕೃಷ್ಣ ಹೆಗಡೆ, ಸದಸ್ಯರಾದ ಅನಂತ ಹೆಗಡೆ, ಅರವಿಂದ ರಾವ್, ಶ್ರೀಕಾಂತ ಭಟ್ಟ, ಸೀಮಾ ಲಕ್ಷ್ಮೀಶ ಹೆಗಡೆ, ಪ್ರದೀಪ ಹೆಗಡೆ, ಮಹೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಹನಾ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ರಾಜಪ್ಪ ಹೆಚ್ ಸ್ವಾಗತಿಸಿದರು. ಗೌರವ ಶಿಕ್ಷಕಿ ಶುಭಾ ಭಟ್ಟ ವರದಿ ವಾಚಿಸಿದರು. ಭಾಷಾ ಶಿಕ್ಷಕಿ ಮಮತಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಮಮತಾ ಬಂಗ್ಲೆ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಶಿಕ್ಷಕರಾದ ಸುಧೀರ ಹೇಮಾದ್ರಿ ಹಾಗೂ ಬಿ.ಬಿ. ಮಾಲೀಪಾಟೀಲ್ ನಡೆಸಿಕೊಟ್ಟರು. ಶಿಕ್ಷಕರಾದ ಶಿವಾನಂದ ಗಡದೆ, ಧನ್ಯಾ ಹೆಗಡೆ ಹಾಗೂ ದರ್ಶನ ಜಕ್ಕಣ್ಣನವರ್ ಸಹಕರಿಸಿದರು. ನಂತರ ಭರತ ನಾಟ್ಯ ಕಲಾವಿದೆ ಡಾ. ಸಹನಾ ಭಟ್ಟ ಇವರಿಂದ ದ್ರೌಪದಿ ಪಾತ್ರಾಭಿನಯದ ಭರತ ನಾಟ್ಯ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.