ಸಾರಾಂಶ
ಸಂಡೂರು: ವ್ಯಕ್ತಿಗಳ ಜೀವನದಲ್ಲಿ ಗುರಿ ಹಾಗೂ ಗುರು ಇದ್ದಲ್ಲಿ ಪ್ರಗತಿ ಸಾಧ್ಯ. ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ಖಾಸಗಿ ಶಿಕ್ಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್ ತಿಳಿಸಿದರು.
ಪಟ್ಟಣದ ಗುರು ಭವನದಲ್ಲಿ ಶನಿವಾರ ರಾಜ್ಯ ಖಾಸಗಿ ಶಿಕ್ಷಕರ ಬಳಗದ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಸಂಡೂರು ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಗಳೂರಿನ ನಿವೃತ್ತ ಉಪನ್ಯಾಸಕ ಜಿ.ಎಸ್. ಸುಭಾಷ್ ಚಂದ್ರಬೋಸ್ ಅವರು ಉಪನ್ಯಾಸ ನೀಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತಿವೆ. ಹೆಚ್ಚಿನ ಫಲಿತಾಂಶವನ್ನು ನೀಡುವಲ್ಲಿಯೂ ಖಾಸಗಿ ಶಾಲಾ ಕಾಲೇಜುಗಳ ಪಾತ್ರ ಪ್ರಮುಖವಾಗಿದೆ. ಮಕ್ಕಳ ಭವಿಷ್ಯ ಶಿಕ್ಷಕರ ಕೈಯ್ಯಲ್ಲಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಅಗತ್ಯವಾಗಿದೆ ಎಂದರು.
ರೋಟರಿ ಟ್ರಸ್ಟ್‌ನ ಅಧ್ಯಕ್ಷೆ ರೂಪಾ ಯು. ಲಾಡ್ ಉತ್ತಮ ಶಿಕ್ಷಣದಿಂದ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಶಿಸ್ತು, ಸಮಯ ಪಾಲನೆ, ಪರಸ್ಪರ ಸಹಕಾರ, ಗುರು ಹಿರಿಯರಿಗೆ ಗೌರವ ತೋರುವುದು ಮುಂತಾದ ಗುಣಗಳನ್ನು ಬೆಳೆಸುವುದು ಅಗತ್ಯವಾಗಿದೆ. ಶಿಕ್ಷಕರು ಜ್ಯೋತಿಯಂತೆ ಉತ್ತಮ ಶಿಕ್ಷಣದ ಮೂಲಕ ಹಲವಾರು ವಿದ್ಯಾರ್ಥಿಗಳ ಜೀವನವನ್ನು ಬೆಳಗುತ್ತಾರೆ. ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಅಧ್ಯಕ್ಷ ಕೆ.ಕುಮಾರಸ್ವಾಮಿ ಮಾತನಾಡಿ, ಸುಮಾರು 30 ವರ್ಷಗಳಿಂದ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿಲ್ಲ. ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆನ್ನುವ ಬೇಡಿಕೆ ಹಾಗೆಯೇ ಇದೆ. ಖಾಸಗಿ ಶಾಲೆಗಳೂ ಶಿಕ್ಷಕರ ಕಲ್ಯಾಣ ನಿಧಿಗೆ ಹಣವನ್ನು ತುಂಬಿದರೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಈ ನಿಧಿಯಿಂದ ಯಾವುದೇ ಸಹಾಯಧನ ದೊರೆಯುತ್ತಿಲ್ಲ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಅವರು ಸಂಸದ ಈ. ತುಕಾರಾಂ ಹಾಗೂ ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅವರು ಕಾರ್ಯಕ್ರಮಕ್ಕೆ ಶುಭಕೋರಿ ಕಳುಹಿಸಿದ ಸಂದೇಶ ಕುರಿತು ತಿಳಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕರಿಶೆಟ್ಟಿ, ಪುರಸಭೆ ಉಪಾಧ್ಯಕ್ಷೆ ಎಂ.ಸಿ. ಲತಾ ಉಜ್ಜಪ್ಪ, ಪಿ.ಎಂ. ಪೋಷಣ್ ಯೋಜನೆಯ ಉಪ ನಿರ್ದೇಶಕ ಶ್ರೀಧರ್ ಮೂರ್ತಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುದೇವಯ್ಯ ಹಾಗೂ ಅಧ್ಯಕ್ಷತೆಯನ್ನು ವಹಿಸಿದ್ದ ಖಾಸಗಿ ಶಿಕ್ಷಕರ ಬಳಗದ ಅಧ್ಯಕ್ಷ ಟಿ.ಎಂ. ಪುರುಷೋತ್ತಮ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಕ್ಯಾಲೆಂಡರ್ ಅನ್ನು ಗಣ್ಯರು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಖಾಸಗಿ ಶಾಲೆಗಳ 31 ಶಿಕ್ಷಕರಿಗೆ ಸಂಡೂರು ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ನೀಲಕಂಠಾಚಾರಿ ಕಮ್ಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಶಿಕ್ಷಕಿ ವರ್ಷಾ ಜಿ. ಪಟೇಲ್ ವಾಚಿಸಿದರು. ಹನುಮೇಶ್ ಪ್ರಾರ್ಥಿಸಿದರು. ಎಂ.ಡಿ. ರಮೇಶ್ ಸ್ವಾಗತಿಸಿದರು. ಪರಶುರಾಮ್ ನಿರೂಪಿಸಿದರು. ಹುಲುಗಪ್ಪ ವಂದಿಸಿದರು.
ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಂ. ಮಹಾಂತೇಶ್, ಖಜಾಂಚಿ ನಾಗರಾಜ, ಖಾಸಗಿ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಫಿರೋಜ್, ಹಾಲಿ ಪದಾಧಿಕಾರಿಗಳು, ವಿವಿಧ ಶಿಕ್ಷಕರ ಸಂಘಗಳ ಮುಖಂಡರಾದ ಚೌಕಳಿ ಪರಶುರಾಮಪ್ಪ, ಪ್ರೇಮಾ, ಷಣ್ಮುಖರಾವ್, ಬಿ.ಎಂ. ಶಶಿಧರ, ಜೆಸಿಐ ವಲಯ ಅಧಿಕಾರಿ ಲಿಂಗರಾಜ್, ವಿವಿಧ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಪ್ರಶಸ್ತಿ ಪುರಸ್ಕೃತರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.