ಮುಂಡರಗಿ: ಮಾನವರಲ್ಲಿ ಮಾನವೀಯತೆಯ ಆದರ್ಶ ಗುಣಗಳು ಬೆಳೆದುಕೊಂಡು ಬರುವ ಅವಶ್ಯಕತೆಯಿದೆ. ಅನುಭವದಿಂದ ಸಿಗುವ ಜ್ಞಾನ ಓದಿನಿಂದ ಸಿಗುವುದಿಲ್ಲ. ಒರೆಗಲ್ಲಿಗೆ ತಿಕ್ಕಿದಾಗ ಶ್ರೀಗಂಧದ ಸುಗಂಧ ಹೊರಹೊಮ್ಮುವಂತೆ ಸಂಕಷ್ಟಗಳನ್ನು ಎದುರಿಸಿದ ಮನುಷ್ಯ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ. ವ್ಯಕ್ತಿತ್ವ ವಿಕಾಸವೇ ವೀರಶೈವ ಧರ್ಮದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು ತಿಳಿಸಿದರು.ಬುಧವಾರ ಸಂಜೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ರೇಣುಕಾಚಾರ್ಯರ ಮತ್ತು ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾನವ ಜೀವನ ಉತ್ಕೃಷ್ಟ. ಅರಿವು ಆಚಾರಗಳ ಪ್ರಜ್ಞೆ ಬೇಕು. ಧರ್ಮಾಚರಣೆಯಿಂದ ಮಾನವ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಬದುಕಿನ ಉನ್ನತಿಗೆ ಅಡಿಪಾಯವಾಗಿವೆ. ಬಸಾಪುರ ಗ್ರಾಮಸ್ಥರು ವೀರಭದ್ರೇಶ್ವರ ಮತ್ತು ರೇಣುಕಾಚಾರ್ಯರ ಶಿಲಾ ದೇಗುಲ ನಿರ್ಮಿಸಿ ಉದ್ಘಾಟನೆಯಾಗಿರುವುದು ಸಂತೋಷ ತಂದಿದೆ ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಧರ್ಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವೀರಶೈವ ಲಿಂಗಾಯತರು ಗುರುವಿನಿಂದ ಇಷ್ಟಲಿಂಗ ಮತ್ತು ಮಂತ್ರೋಪದೇಶ ಪಡೆದಾಗ ಮಾತ್ರ ವೀರಶೈವರಾಗುತ್ತೇವೆ. ಹೆಸರಿಗೆ ಲಿಂಗಾಯತರಾದರೆ ಸಾಲದೆಂದರು.

ಮಾನಿಹಳ್ಳಿ ಪುರವರ್ಗಮಠದ ಮಳೆಯೋಗೀಂದ್ರ ಶಿವಾಚಾರ್ಯ ಸ್ವಾಮೀಜಿ, ಬನ್ನಿಕೊಪ್ಪ ಹಿರೇಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮದ ಮತ್ತು ಗುರುವಿನ ಮಹತ್ವದ ಬಗ್ಗೆ ಉಪದೇಶಾಮೃತವನ್ನಿತ್ತರು. ವಿರುಪಾಪುರ ಕಲಕೇರಿಯ ಮುದಕೇಶ್ವರ ಶಿವಾಚಾರ್ಯರು, ಅಭಿನವ ಮುದುಕೇಶ್ವರ ಶ್ರೀಗಳು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ಡೋಣಿ ಅಮೃತೇಶ್ವರ ಹಾಲಸ್ವಾಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯುವ ಮುಖಂಡ ಮಿಥುನಗೌಡ ಪಾಟೀಲ ವೀರಭದ್ರೇಶ್ವರ ದೇವಸ್ಥಾನ ಗೋಪುರ ನಿರ್ಮಾಣಕ್ಕೆ 5 ಲಕ್ಷ ರು.ಗಳನ್ನು ಕೊಡುವುದಾಗಿ ಭರವಸೆಯನಿತ್ತರು. ಮಠದ ಮಲ್ಲಯ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಉತ್ತಂಗಿ ಭಕ್ತಿಗೀತೆ ಹಾಡಿದರು. ನವಲಿ ಹಂಪಸಾಗರ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಬಂದ ಎಲ್ಲ ಭಕ್ತರಿಗೂ ಅನ್ನದಾಸೋಹ ಜರುಗಿತು.