ಮಗುವಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೊಟ್ಟಾಗ, ಉತ್ತಮ ಮೌಲ್ಯ ಬೆಳೆಸಿದಾಗ ಅದು ದೇಶದ ಸಂಪತ್ತಾಗುತ್ತದೆ. ಮನೆಯ ಆಸ್ತಿಯಾಗುತ್ತದೆ.

ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ

ಕನ್ನಡಪ್ರಭ ವಾರ್ತೆ ಸಂಡೂರು

ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳ ಅಭಿರುಚಿ ಹಾಗೂ ಆಸಕ್ತಿ ಗಮನಿಸಿ, ಆಸಕ್ತಿಯ ಕ್ಷೇತ್ರದಲ್ಲಿ ಪ್ರೋತ್ಸಾಹಿಸಿದಾಗ ಮಕ್ಕಳು ಪ್ರಗತಿ ಸಾಧಿಸಲು ಸಾಧ್ಯ ಎಂದು ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅಭಿಪ್ರಾಯಪಟ್ಟರು.

ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಸೋಮವಾರ ಜರುಗಿದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಗುವಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೊಟ್ಟಾಗ, ಉತ್ತಮ ಮೌಲ್ಯ ಬೆಳೆಸಿದಾಗ ಅದು ದೇಶದ ಸಂಪತ್ತಾಗುತ್ತದೆ. ಮನೆಯ ಆಸ್ತಿಯಾಗುತ್ತದೆ. ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಕಳೆದ ೨೦ ವರ್ಷಗಳಿಂದ ಸಚಿವ ಸಂತೋಷ್ ಲಾಡ್ ಹಾಗೂ ಸಂಸದ ಈ.ತುಕರಾಂ ಶ್ರಮಿಸುತ್ತಿದ್ದಾರೆ. ನಂಜುಂಡಪ್ಪ ವರದಿಯ ಅನ್ವಯ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿಯಿಂದ ಹೊರತರುವಂತಹ ಎಲ್ಲ ಕಾರ್ಯ ಮಾಡಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್. ಅಕ್ಕಿಯವರು ಮಾತನಾಡಿ, ಶಿಕ್ಷಣ ನಮ್ಮ ಸಂಪತ್ತು. ಅದನ್ನು ಕೊಡುವಲ್ಲಿ ಖಾಸಗಿ ಶಾಲೆಗಳ ಪಾತ್ರವೂ ಸಹ ಅಮೋಘವಾಗಿದೆ. ಈ ಕಾರ್ಯ ನಿರಂತರವಾಗಿರಲಿ ಎಂದರು.

ಸಂಸ್ಥೆಯ ಮುಖ್ಯಸ್ಥ ಕೆ. ಕುಮಾರಸ್ವಾಮಿ ಮಾತನಾಡಿ, ಕಳೆದ ೩೦ ವರ್ಷಗಳಿಂದ ಈ ಸಂಸ್ಥೆ ತನ್ನದೇ ಆದ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸಮಾಜಮುಖಿ ಹಾಗೂ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಬಹಳಷ್ಟು ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ಸ್ಥಾನಕ್ಕೇರಿದ್ದಾರೆ. ಅವರ ಬೆಳವಣಿಗೆಯೇ ಸಂಸ್ಥೆಯ ಬೆಳವಣಿಗೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳು ಛದ್ಮವೇಷ ಧರಿಸಿ ನೋಡುಗರ ಗಮನ ಸೆಳೆದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕ್ಷೇತ್ರ ಸಮನ್ವಯಾಧಿಕಾರಿ ಶರಣಪ್ಪ ಕರಿಶೆಟ್ಟಿ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ಬಿ.ಎಂ. ಮಹಾಂತೇಶ್, ಟಿ.ಎಂ. ಪುರುಷೋತ್ತಮ, ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳ ಪಾಲಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.