ಚಳ್ಳಕೆರೆ ನಗರಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

| Published : Dec 05 2024, 12:33 AM IST

ಸಾರಾಂಶ

ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯ ಜೊತೆಗೆ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಕ್ಷೇತ್ರದ ಶಾಸಕ, ರಘುಮೂರ್ತಿ ಸುಮಾರು ಮೂರು ಗಂಟೆಗಳ ಕಾಲ ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ಸಭೆ ನಡೆಸಿ ನಗರಸಭೆ ಆಡಳಿತದ ಮೇಲೆ ಲಗಾಮು ಹಾಕುವಲ್ಲಿ ಶಾಸಕರು ಸೂಚನೆಗಳನ್ನು ನೀಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯ ಜೊತೆಗೆ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಕ್ಷೇತ್ರದ ಶಾಸಕ, ರಘುಮೂರ್ತಿ ಸುಮಾರು ಮೂರು ಗಂಟೆಗಳ ಕಾಲ ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ಸಭೆ ನಡೆಸಿ ನಗರಸಭೆ ಆಡಳಿತದ ಮೇಲೆ ಲಗಾಮು ಹಾಕುವಲ್ಲಿ ಶಾಸಕರು ಸೂಚನೆಗಳನ್ನು ನೀಡಿದರು.

ವಿಶೇಷವೆಂದರೆ ನಗರಸಭೆ ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷದ ವಶದಲ್ಲಿದ್ದರೂ ಸಹ ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಸೌಹಾರ್ಧಿತ ಕೊರತೆಯ ಹಿನ್ನೆಲೆ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ಯಾವುದೇ ಪ್ರಯತ್ನ ನಡೆದಿಲ್ಲ. ಕಳೆದ ನಾಲ್ಕು ತಿಂಗಳ ಹಿಂದೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಜಿ.ಎಚ್. ಜಗರೆಡ್ಡಿ ಸಹ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವನ್ನು ನಿಯಂತ್ರಿಸುವಲ್ಲಿ ಸಾಧ್ಯವಾಗಿಲ್ಲ. ಒಂದು ಹಂತದಲ್ಲಿ ಪೌರಾಯುಕ್ತರೇ ಶಾಸಕರೆದುರು ಸಿಬ್ಬಂದಿ ನನ್ನ ಮಾತು ಕೇಳುತ್ತಿಲ್ಲವೆಂದು ಸಹಾಯಕತೆ ತೋಡಿಕೊಂಡರು.

ಕಂದಾಯಾಧಿಕಾರಿ ಸತೀಶ್, ಸಹ ಇ-ಸ್ವತ್ತು ದಾಖಲಾತಿ ವಿಲೇಯಲ್ಲಿ ವಿಳಂಬದ ಬಗ್ಗೆ ಪ್ರಶ್ನಿಸಿ ತಮ್ಮ ಸಿಬ್ಬಂದಿ ಕಡೆ ಬೊಟ್ಟುಮಾಡಿತೋರಿಸಿದರು. ಬಾಕಿ ಉಳಿದಿರುವ ಎಲ್ಲಾ ಇ-ಸ್ವತ್ತುಗಳ ದಾಖಲಾತಿಯನ್ನು 15ದಿನಗಳ ಒಳಗೆ ಸಂಬಂಧಪಟ್ಟವರಿಗೆ ನೀಡಬೇಕೆಂದು ಸೂಚಿಸಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಪರಿಶಿಷ್ಟ ಪಂಗಡ ವ್ಯಾಪ್ತಿಯಲ್ಲಿದ್ದು, ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ 2021-2ರವರೆಗೂ ಒಟ್ಟು 150 ಲಕ್ಷ ವಿದ್ಯಾರ್ಥಿವೇತನ ವಿತರಣೆ ಯಾಗಬೇಕಿದ್ದು, ಕೇವಲ 30 ಲಕ್ಷ ವೆಚ್ಚ ಮಾಡಿ ಉಳಿದ ಹಣವನ್ನು ಹಾಗೇ ಇಡಲಾಗಿದೆ. ಮೂರು ವರ್ಷಗಳಿಂದ ವಿದ್ಯಾರ್ಥಿವೇತನ ನೀಡದ ಬಗ್ಗೆ ಖಾರವಾಗಿ ಪ್ರಶ್ನಿಸಿದ ಶಾಸಕರು ಸಂಬಂಧಪಟ್ಟ ಸಿಬ್ಬಂದಿ ಗುರುಪ್ರಸಾದ್‌ನನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಮುದಾಯ ಅಧಿಕಾರಿ ಭೂತಣ್ಣನವರಿಗೆ 15 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವೇತನ ಹಣ ಪಾವತಿಸುವ ವ್ಯವಸ್ಥೆ ಮಾಡಿ ಎಂದರು.

ಇಂದಿರಾ ಶಾಪಿಂಕ್ ಕಾಂಪ್ಲೆಕ್ಸ್ ಬಹುತೇಕ ಮಳಿಗೆಗಳು ಶಿಥಿಲಗೊಂಡಿದ್ದು, ಯಾವುದೇ ಸಂದರ್ಭದಲ್ಲೂ ಬೀಳುವ ಸಂಭವವಿದೆ. ಇತ್ತೀಚೆಗೆ ಮಳೆ ಹೆಚ್ಚಾಗಿ ಇನ್ನೂ ಕೆಲವು ಕೊಠಡಿಗಳು ಹಾಳಾಗಿದ್ದು, ಈಗ ಹಾಲಿ ಕಟ್ಟಡದಲ್ಲಿರುವ ಬಾಡಿಗೆದಾರರನ್ನು ಬಿಡಿಸಿ ಮಳಿಗಳನ್ನು ತುರ್ತು ರಿಪೇರಿಗೊಳಿಸುವಂತೆ ಸೂಚಿಸಿದರು. ನಗರಸಭೆ ಆಡಳಿತ ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಎಲ್ಲಾ ಚುನಾಯಿತ ಸದಸ್ಯರು ಪಕ್ಷಬೇಧ ಮರೆತು ಅಧಿಕಾರಿಗಳಿಗೆ ಸಹಕಾರ ನೀಡುವಂತೆ ತಿಳಿಸಿದರು.

ನಗರ ಪ್ರದೇಶದ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದೆ. ಈಗ ಹಾಲಿ ಇರುವ 93 ಪೌರಕಾರ್ಮಿಕರ ಜೊತೆಗೆ ಹೆಚ್ಚುವರಿಯಾಗಿ 22 ಪೌರಕಾರ್ಮಿಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವಂತೆ ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬುಗೆ ಸೂಚಿಸಿದರು. ಅನೇಕ ಸದಸ್ಯರು ಕಳೆದ ಆರುತಿಂಗಳಿನಿಂದ ಚರಂಡಿಗಳಿಗೆ ಬ್ಲಿಚಿಂಗ್ ಪೌಂಡರ್ ಸಿಂಪಡಿಸಿ ಎಂದು ಆರೋಪಿಸಿದಾಗ, ಖರೀದಿಸಿ ಎಲ್ಲಾ ಚರಂಡಿಗಳಿಗೆ ಬ್ಲಿಚಿಂಗ್ ಪೌಂಡರ್ ಸಿಂಪಡೆ ಮಾಡುವಂತೆ ಸೂಚಿಸಿದರು.

ನಗರ ಪ್ರದೇಶದಲ್ಲಿ ಸ್ಮಶಾನ ಒತ್ತುವರಿ ಮಾಡಿಕೊಂಡ ಬಗ್ಗೆ ಆರೋಪಿಸಿದಾಗ, ಕೂಡಲೇ ಸರ್ವೆ ಅಧಿಕಾರಿ ಬಾಬುರೆಡ್ಡಿಗೆ ಸೂಚಿಸಿದ ಶಾಸಕರು, ಸರ್ವೆ ಮಾಡಿ ಒತ್ತುವರಿಯನ್ನು ಗುರುತಿಸುವಂತೆ ನಿರ್ದೇಶನ ನೀಡಿದರು. ನಗರ ಪ್ರದೇಶದ ಸ್ಮಶಾನಗಳಲ್ಲಿ ಜಾಲಿ, ಗಿಡಗಂಟೆಗಳು ಬೆಳೆದಿದ್ದು ಅವುಗಳನ್ನು ತೆಗೆಸಬೇಕೆಂದರು. ನಗರದ ಕೆಲವು ಪ್ರದೇಶಗಳಲ್ಲಿ ಬೀದಿನಾಯಿ ಮತ್ತು ಬೀಡಾಡಿದನಗಳ ಕಾಟ ಹೆಚ್ಚಾಗಿದ್ದು ನಿಯಂತ್ರಿಸುವಂತೆ ಸೂಚಿಸಿದರು.

ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಟಿ. ಮಲ್ಲಿಕಾರ್ಜುನ್, ಕವಿತಾಬೋರಯ್ಯ, ಟಿ. ಶಿವಕುಮಾರ್, ಪ್ರಮೋದ್, ಸುಮಾ, ಜಿ. ಗೋವಿಂದ, ಎಂ. ನಾಗಮಣಿ, ಸುಮಕ್ಕ, ನಿರ್ಮಲ, ಎಂ.ಜೆ. ರಾಘವೇಂದ್ರ, ತಿಪ್ಪಮ್ಮ, ಮಂಜುಳಾ, ಸಿ.ಬಿ. ಜಯಲಕ್ಷ್ಮೀ ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಸಿ. ಶ್ರೀನಿವಾಸ್, ಬಿ.ಟಿ. ರಮೇಶ್‌ಗೌಡ, ಕೆ. ವೀರಭದ್ರಯ್ಯ, ಶಿಲ್ಪ, ವ್ಯವಸ್ಥಾಪಕ ಲಿಂಗರಾಜು, ಲೆಕ್ಕಾಧಿಕಾರಿ ಹರೀಶ್, ಆರೋಗ್ಯ ನಿರೀಕ್ಷಕರಾದ ಗಣೇಶ್, ಗೀತಾಕುಮಾರಿ, ಸುನೀಲ್, ರುದ್ರಮುನಿ ಮುಂತಾದವರು ಉಪಸ್ಥಿತರಿದ್ದರು.