ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ

| Published : Sep 13 2024, 01:30 AM IST

ಸಾರಾಂಶ

ಓವರ್ ಹೆಡ್ ಟ್ಯಾಂಕ್ ಗಳು ಪೂರ್ಣವಾಗುತ್ತಿಲ್ಲ. ಕೆ.ಆರ್. ಕ್ಷೇತ್ರಕ್ಕೆ ಎಷ್ಟು ನೀರನ್ನು ಡ್ರಾ ಮಾಡಲಾಗುತ್ತಿದೆ,

ಕನ್ನಡಪ್ರಭ ವಾರ್ತೆ ಮೈಸೂರು

ಕಬಿನಿ, ಕೆಆರ್ ಎಸ್ ಜಲಾಶಯದಿಂದ ನಗರಕ್ಕೆ ನೀರು ಸರಬರಾಜು ಆಗುತ್ತಿದ್ದರೂ ಕೆ.ಆರ್. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ನ.15ರ ಒಳಗೆ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಕೆ.ಆರ್. ಕ್ಷೇತ್ರದ ಪ್ರತಿ ಮನೆಗೂ ನೀರು ಸರಬರಾಜು ಮಾಡಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಸೂಚಿಸಿದರು.ನಗರಪಾಲಿಕೆ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕೃಷ್ಣರಾಜ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಪ್ರತಿನಿತ್ಯ ಎಇಇಗಳಿಗೆ ದೂರವಾಣಿ ಕರೆ ಮಾಡಿ ಹೇಳಬೇಕಿದೆ. ಅಧಿಕಾರಿಗಳು ಸಮರೋಪಾದಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿದರು.ಬೆಮೆಲ್ ನಗರ, ಶ್ರೀರಾಂಪುರ, ಅರವಿಂದನಗರ, ಸುಣ್ಣದಕೇರಿ, ಕಾಕರವಾಡಿ, ಹುಲ್ಲಿನ ಬೀದಿ, ಚಾಮುಂಡಿಪುರಂ ಮೊದಲಾದ ಬಡಾವಣೆಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಓವರ್ ಹೆಡ್ ಟ್ಯಾಂಕ್ ಗಳು ಪೂರ್ಣವಾಗುತ್ತಿಲ್ಲ. ಕೆ.ಆರ್. ಕ್ಷೇತ್ರಕ್ಕೆ ಎಷ್ಟು ನೀರನ್ನು ಡ್ರಾ ಮಾಡಲಾಗುತ್ತಿದೆ, ಎಷ್ಟು ಸರಬರಾಜು ಮತ್ತು ವಿತರಣೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.ಇದಕ್ಕೆ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಪ್ರತಿಕ್ರಿಯಿಸಿ, ನಗರದ ಪ್ರತಿಯೊಂದು ಟ್ಯಾಂಕ್ ಗಳಲ್ಲಿ ಓವರ್ ಪ್ಲೋ ತಡೆಯಲು ಸೆನ್ಸಾರ್ ಅಳವಡಿಸಬೇಕು. ಬಲ್ಕ್ ಪ್ಲೋ ಮೀಟರ್ ಗಳನ್ನು ಅಳವಡಿಸಿದರೆ ಸಣ್ಣ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಸಲಹೆ ನೀಡಿದರು.ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಮುಸ್ತಫಾ ಮಾತನಾಡಿ, ಕೆಲವು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಕಬಿನಿ ನದಿಯಿಂದ ಕೆ.ಆರ್. ಕ್ಷೇತ್ರದ ಬಹುಪ್ರದೇಶಗಳು, ಇಟ್ಟಿಗೆಗೂಡು, ಗೌರಿಶಂಕರನಗರಕ್ಕೆ ಮೇಳಾಪುರ ಯೋಜನೆಯಡಿ ನೀರು ಕೊಡಲಾಗುತ್ತಿದೆ ಎಂದರು. ಕಬಿನಿ ನದಿಯಿಂದ 60 ಎಂಎಲ್ ಡಿ ನೀರು ಡ್ರಾ ಮಾಡಲಾಗುತ್ತಿದ್ದು, ಮಣ್ಣು ಮಿಶ್ರಿತ ನೀರು ವಿತರಣೆಯಾಗುತ್ತಿದ್ದರಿಂದ ಪಂಪ್, ಮೋಟಾರ್ ಅಪ್ ಗ್ರೇಡ್ ಮಾಡಲಾಗಿತ್ತು. ಶುದ್ಧೀಕರಣ ಘಟಕದಿಂದ ಬಡಾವಣೆಗಳಿಗೆ ನೇರವಾಗಿ ನೀರು ಸರಬರಾಜು ಆಗುತ್ತಿದ್ದು, 8 ಕಡೆಗಳಲ್ಲಿ ಲಿಂಕ್ ಕೊಡಬೇಕಿದೆ. ಸತತ 15 ದಿನಗಳ ಕಾಲ ಮೋಟಾರ್ ಚಾಲ್ತಿಯಲ್ಲಿರಬೇಕಾಗಿರುವ ಕಾರಣ ಡಿಸೆಂಬರ್ ತಿಂಗಳೊಳಗೆ ಪರಿಹರಿಸಲಾಗುವುದು ಎಂದು ಹೇಳಿದರು. ಇದಕ್ಕೆ ಒಪ್ಪದ ಶಾಸಕರು, ನ.15ರ ಒರೊಳಗೆ ಎಲ್ಲಾ ರೀತಿಯ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.ಪಾಲಿಕೆ ಹೆಚ್ಚುವರಿ ಆಯುಕ್ತರಾದ ಮೋಹನಕುಮಾರಿ, ಜೆ.ಎಸ್. ಸೋಮಶೇಖರ್, ಅಧೀಕ್ಷಕ ಎಂಜಿನಿಯರ್ ಕೆ.ಜೆ. ಸಿಂಧು, ವಲಯ ಸಹಾಯಕ ಆಯುಕ್ತರಾದ ಎಸ್. ಸತ್ಯಮೂರ್ತಿ, ಮಂಜುನಾಥ್ ರೆಡ್ಡಿ, ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಅಶ್ವಿನ್ ಮೊದಲಾದವರು ಇದ್ದರು.