ಕಂಪ್ಲಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ

| Published : Sep 04 2025, 01:01 AM IST

ಸಾರಾಂಶ

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ, ಅಡಚಣೆಗಳು ಮತ್ತು ಮುಂದಿನ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಅಧ್ಯಕ್ಷ ಕೆ.ಶ್ರೀನಿವಾಸರಾವ್ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಹಿತಕ್ಕಾಗಿ ರೂಪಿಸಲ್ಪಟ್ಟಿವೆ. ಆದ್ದರಿಂದ ಅಧಿಕಾರಿಗಳು ಸಮನ್ವಯ ಸಾಧಿಸಿ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತೆ ನೋಡಿಕೊಳ್ಳಬೇಕು. ಇನ್ನೂ ಯೋಜನೆಗಳಿಂದ ವಂಚಿತರಾಗಿರುವವರು ಇದ್ದರೆ ತಕ್ಷಣವೇ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗೃಹಜ್ಯೋತಿ ಯೋಜನೆಯಡಿ ಇದುವರೆಗೆ 1444 ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಬಂತು. ಈ ಹಿನ್ನೆಲೆ ಅಧ್ಯಕ್ಷರು ಗ್ರಾಮ ಪಂಚಾಯಿತಿಗಳಿಂದ ಲಾಭಾರ್ಥಿಗಳ ಪಟ್ಟಿ ಪಡೆಯಲು ಸೂಚನೆ ನೀಡಿದರು.

ತಾಲೂಕು ಇಒ ಆರ್.ಕೆ. ಶ್ರೀಕುಮಾರ್ ಮಾತನಾಡಿ, ಅರ್ಹ ಕುಟುಂಬಗಳನ್ನು ಗುರುತಿಸಲು ಸ್ಥಳ ಗುರುತಿಸುವಿಕೆ ಮತ್ತು ಆರ್.ಆರ್. ನಂಬರ್ ವಿವರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಯುವನಿಧಿ ಯೋಜನೆ ಕುರಿತ ಚರ್ಚೆಯಲ್ಲಿ ಇದುವರೆಗೆ 790 ಅರ್ಜಿ ಬಂದಿದ್ದು, 733 ಪದವೀಧರರು, 57 ಡಿಪ್ಲೊಮಾ ಪದವೀಧರರು, ನೋಂದಾಯಿಸಿರುವುದಾಗಿ ತಿಳಿಸಲಾಯಿತು. ಈ ಯೋಜನೆಗಾಗಿ ಇದುವರೆಗೆ ₹1.46 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.

2023ರ ಜೂನ್ 11ರಿಂದ ಇಂದಿನವರೆಗೆ ಕುರುಗೋಡು ಘಟಕದಿಂದ ಮಾತ್ರವೇ 51,52,712 ಪ್ರಯಾಣಿಕರು ಶಕ್ತಿ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ.

ಈ ಅವಧಿಯಲ್ಲಿ ಸಂಸ್ಥೆಗೆ ₹21.77 ಕೋಟಿ ಆದಾಯ ಆಗಿದೆ. ಯೋಜನೆಯ ವ್ಯಾಪಕ ಪ್ರಯೋಜನದೊಂದಿಗೆ ಸಾಮಾನ್ಯ ಜನರಿಗೆ ಸಂಚಾರ ಸುಗಮವಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಇದೇ ವೇಳೆ ಸದಸ್ಯರು ಡಿಪ್ಲೊಮಾ ಕಾಲೇಜು, ಡಿಗ್ರಿ ಕಾಲೇಜು ಹಾಗೂ ತಾಲೂಕು ಆಡಳಿತ ಸೌಧ (ತಾಪಂ ಕಚೇರಿ) ಬಳಿಯಲ್ಲೂ ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಅನ್ನಭಾಗ್ಯ ಯೋಜನೆ ಕುರಿತ ಚರ್ಚೆಯಲ್ಲಿ, ಲಾಭಾರ್ಥಿಗಳ ಇ–ಕೆವೈಸಿ ಅಪ್‌ಡೇಟ್ ಆಗದಿರುವುದು ದೊಡ್ಡ ಅಡಚಣೆಯಾಗುತ್ತಿದೆ ಎಂದು ತಿಳಿಸಲಾಯಿತು. ಅಧಿಕಾರಿಗಳು ಶೀಘ್ರವೇ ಎಲ್ಲಾ ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು. ಸದಸ್ಯರು, ಪಡಿತರ ಚೀಟಿಯಲ್ಲಿ ಮಹಿಳೆಯರ ಸೇರ್ಪಡೆ ವೇಗವಾಗಿ ನಡೆಯುತ್ತಿದೆ, ಆದರೆ ಪುರುಷರ ಸೇರ್ಪಡೆ ಪ್ರಕ್ರಿಯೆ ನಿಧಾನವಾಗಿದೆ. ಈ ವ್ಯತ್ಯಾಸವನ್ನು ನಿವಾರಣೆ ಮಾಡುವ ಅಗತ್ಯವಿದೆ ಎಂದರು. ಸಭೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂಬ ವಿಷಯವೂ ಚರ್ಚೆಗೆ ಬಂತು. ಮಕ್ಕಳು ನಿಯಮಿತವಾಗಿ ಹಾಜರಾಗುವಂತೆ ಪಾಲಕರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಬಲಪಡಿಸಬೇಕೆಂದು ಸದಸ್ಯರು ಒತ್ತಾಯಿಸಿದರು.

ಸಭೆಯಲ್ಲಿ ನರೇಗಾ ಎಡಿ ಕೆ.ಎಸ್. ಮಲ್ಲನಗೌಡ, ಸಮಿತಿ ಸದಸ್ಯರಾದ ಶಿವಕುಮಾರ್, ಸಿ. ವಿಜಯಲಕ್ಷ್ಮಿ, ಶಿವರಾಜಕುಮಾರ್, ವಿ. ರಮೇಶ್, ಮಂಜುನಾಥ, ವೀರಭದ್ರಗೌಡ, ರೇಣುಕಮ್ಮ, ಕರಿಯಪ್ಪ, ಎಂ. ವೀರೇಶ, ಎಂ. ರಾಜಾಭಕ್ಷಿ, ಲಕ್ಷ್ಮಿಕಾಂತ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.