ಮಾರ್ಚ್ ಅಂತ್ಯದೊಳಗೆ ಸಾಲ ನೀಡಿಕೆಯಲ್ಲಿ ಪ್ರಗತಿ ಸಾಧಿಸಬೇಕು-ಸಂಸದ ಬೊಮ್ಮಾಯಿ

| Published : Nov 11 2025, 02:15 AM IST

ಮಾರ್ಚ್ ಅಂತ್ಯದೊಳಗೆ ಸಾಲ ನೀಡಿಕೆಯಲ್ಲಿ ಪ್ರಗತಿ ಸಾಧಿಸಬೇಕು-ಸಂಸದ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಪಿ.ಎಂ.ಸ್ವನಿಧಿ, ಎಂ.ಪಿ.ಕಿಸಾನ್, ಮುದ್ರಾ ಸೇರಿದಂತೆ ಬಡವರ ಯೋಜನೆಗಳು ಅರ್ಹರಿಗೆ ತಲುಪುವಂತೆ ಅಧಿಕಾರಿಗಳು ಹಾಗೂ ಬ್ಯಾಂಕರ್ಸಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಾರ್ಚ್ ಅಂತ್ಯದೊಳಗೆ ಗುರಿಸಾಧನೆ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಹಾವೇರಿ:ಪಿ.ಎಂ.ಸ್ವನಿಧಿ, ಎಂ.ಪಿ.ಕಿಸಾನ್, ಮುದ್ರಾ ಸೇರಿದಂತೆ ಬಡವರ ಯೋಜನೆಗಳು ಅರ್ಹರಿಗೆ ತಲುಪುವಂತೆ ಅಧಿಕಾರಿಗಳು ಹಾಗೂ ಬ್ಯಾಂಕರ್ಸಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಾರ್ಚ್ ಅಂತ್ಯದೊಳಗೆ ಗುರಿಸಾಧನೆ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಮಹಿಳೆಯರು ಹಾಗೂ ಇತರೆ ವಲಯಕ್ಕೂ ಗರಿಷ್ಠ ಸಾಲ ನೀಡಬೇಕು ಎಂದು ಸೂಚನೆ ನೀಡಿದರು.ಬಡವರ ಯೋಜನೆಗಳಿಗೆ ನೀಡುವ ಸಾಲ ರು.10ರಿಂದ 15 ಸಾವಿರ ಹಣದ ವ್ಯವಹಾರದಲ್ಲ್ಲಿ ಅಧಿಕಾರಿಗಳಿಗೆ ಇರದ ಅಧಿಕಾರ ಬ್ಯಾಂಕ್‌ನವರಿಗೆ ಇದೆ. ಇದನ್ನು ತಿಳಿದುಕೊಂಡು ಬ್ಯಾಂಕ್‌ನವರು ಹೃದಯದಿಂದ ಕೆಲಸ ಮಾಡಬೇಕು. ಮುಂದಿನ ಸಭೆಯೊಳಗೆ ಎಲ್ಲರೂ ಪ್ರಗತಿ ವರದಿ ನೀಡಬೇಕು ಎಂದು ಸೂಚಿಸಿದರು.ಯೋಜನೆಗಳ ಅರಿವು ಮೂಡಿಸಿ:ಪಿ.ಎಂ.ಸ್ವನಿಧಿ, ಎಂ.ಪಿ.ಕಿಸಾನ್, ವಿಶ್ವಕರ್ಮ, ಮುದ್ರಾ ಸೇರಿದಂತೆ ವಿವಿಧ ಯೋಜನೆಗಳ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಈ ಯೋಜನೆಗಳ ವ್ಯಾಪ್ತಿಗೆ ಬರುವ ಫಲಾನುಭವಿಗಳ ಸರ್ವೇಮಾಡಿ, ಯಾವ ಯೋಜನೆಗಳಿಗೆ ವರ್ಗವಾರು ಎಷ್ಟು ಸಾಲ, ಸಹಾಯಧನ ಸಿಗುತ್ತದೆ, ಅದಕ್ಕೆ ಬೇಕಾದ ದಾಖಲೆಗಳ ಮಾಹಿತಿ ನೀಡಬೇಕು. ಅಧಿಕಾರಿಗಳು ಕಾಳಜಿಯಿಂದ ಮಾಡಿದರೆ ಬಡವರ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು..ವಿವಿಧ ಯೋಜನೆಗಳ ಸಾಲ ಸೌಲಭ್ಯಕ್ಕೆ ಫಲಾನುಭವಿಗಳ ಅರ್ಜಿಯನ್ನು ಬ್ಯಾಂಕ್‌ಗಳಿಗೆ ಕಳುಹಿಸಿ ಕುಳಿತರೆ ಅಧಿಕಾರಿಗಳ ಕೆಲಸ ಮುಗಿಯಲ್ಲ, ಸಾಲ ಮಂಜೂರು ಆಗುವರೆಗೆ ಅದನ್ನು ಫಾಲೋ ಮಾಡಬೇಕು. ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು ಎಂದು ಸಲಹೆ ನೀಡಿದರು. ಬ್ಯಾಂಕ್ ಶಾಖೆ ಆರಂಭಿಸಿ:ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕುಗಳ ಅವಶ್ಯಕತೆ ಇದ್ದು, ಯಾವುದೇ ಕಾರಣ ಹೇಳದೇ ಶಿಗ್ಗಾಂವ ತಾಲೂಕು ಚಂದಾಪುರ ಹಾಗೂ ಹಾವೇರಿ ತಾಲೂಕು ಹೊಸರಿತ್ತಿಯಲ್ಲಿ ಡಿಸೆಂಬರ್ ಅಂತ್ಯದೊಳಗೆ ಬ್ಯಾಂಕ್ ಶಾಖೆಗಳನ್ನು ಆರಂಭಿಸಬೇಕು ಎಂದು ಬ್ಯಾಂಕರ್ಸ್‌ಗಳಿಗೆ ಸೂಚನೆ ನೀಡಿದರು. ಕರ್ನಾಟಕ ಬ್ಯಾಂಕ್‌ನವರ ರೇಶಿಯೋ ಹೆಚ್ಚಾಗಬೇಕು. ಉತ್ತರ ಕರ್ನಾಟಕದವರಿಂದ ಠೇವಣಿ ಪಡೆದ ಹಣ ದಕ್ಷಿಣ ಕನ್ನಡ ಹಾಗೂ ಇತರೆಡೆ ಸಾಲ ನೀಡುತ್ತಿದ್ದಾರೆ. ಈ ಭಾಗದ ಜನರಿಗೆ ಸಾಲ ಸೌಲಭ್ಯ ದೊರೆಯಲಿ. ಮುಂದಿನ ಸಭೆಗೆ ಹಾಜರಾಗುವಂತೆ ಕರ್ನಾಟಕ ಬ್ಯಾಂಕ್ ಎಂ.ಡಿ.ಗೆ ನೋಟಿಸ್ ನೀಡುವಂತೆ ಜಿ.ಪಂ.ಉಪ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ತಾಂತ್ರಿಕ ಸಮಸ್ಯೆಯಿಂದ ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮ ಪಂಚಾಯತ್ ವ್ಯವಹಾರ ಸ್ಥಗಿತಗೊಂಡಿದೆ. ಹಾಗಾಗಿ ಕೂಡಲೇ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಳ್ಳಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದರು.ಬೆಳೆ ಹಾನಿ ಸಮೀಕ್ಷೆ ವ್ಯತ್ಯಾಸ:ಬೆಳೆಹಾನಿ ಸಮೀಕ್ಷೆ ವ್ಯತ್ಯಾಸವಾಗಿದೆ. ಶಿಗ್ಗಾಂವ ತಾಲೂಕಿನಲ್ಲಿ 44 ಸಾವಿರ ಹೆಕ್ಟೇರ್ ಬಿತ್ತನೆಯಾಗಿದ್ದು, ಬೆಳೆಹಾನಿ ಸಮೀಕ್ಷೆ 710 ಹೆ.ಪ್ರದೇಶ ತೋರಿಸುತ್ತೀರಿ. ರೈತರು ಬೆಳೆವಿಮೆ ಪ್ರೀಮಿಯಂ ತುಂಬುತ್ತಾರೆ. ಇನ್ಸೂರೆನ್ಸ್ ಕಂಪನಿಯವರು ಪರಿಹಾರ ಪಾವತಿಸುತ್ತಾರೆ. ಆದರೆ ಅಧಿಕಾರಿಗಳ ತಪ್ಪಿನಿಂದ ರೈತರಿಗೆ ಅನ್ಯಾಯವಾಗಿದೆ. ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಹಾವೇರಿ ಜಿಲ್ಲೆಗೆ ಬೆಳೆ ವಿಮೆ ಮೊತ್ತ ಬರುತ್ತಿತ್ತು. ಇನ್ಸೂರೆನ್ಸ್ ಕಂಪನಿಯೊಂದಿಗೆ, ಕೃಷಿ ಇಲಾಖೆ, ಅಂಕಿಸಂಖ್ಯೆ ಇಲಾಖೆ ಅಧಿಕಾರಿಗಳು ಶ್ಯಾಮೀಲಾಗಿದ್ದಾರೆ. ಏಜೆಂಟರು 18 ಎಕರೆಗೆ ಬೆಳೆವಿಮೆ ಪ್ರೀಮಿಯಂ ತುಂಬಿದರೆ ಎಲ್ಲದಕ್ಕೂ ಬೆಳೆವಿಮೆ ಬರುತ್ತದೆ, ಆದರೆ ರೈತ ತುಂಬಿದರೆ ಎರಡು ಅಥವಾ ಮೂರು ಎಕರೆ ಮಾತ್ರ ಬೆಳೆ ವಿಮೆ ಪರಿಹಾರ ಬರುತ್ತದೆ. ನಿಮ್ಮ ಕಚೇರಿಯಲ್ಲಿರುವ ವ್ಯಕ್ತಿ ಈ ಕೆಲಸ ಮಾಡುತ್ತಿದ್ದಾನೆ. ಅವನ ವಿರುದ್ಧ ಕ್ರಮಕೈಗೊಳ್ಳದಿದ್ದರೆ ನಿಮ್ಮ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.ವಿಶ್ವ ಕರ್ಮ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸಾಲ ಸಿಗುವಂತಾಗಬೇಕು. ಜನರಿಗೆ ಸಹಾಯ ಮಾಡುವ ಮನಸ್ಸು ಬೇಕು. ಕಾರಣ ಹೇಳುವುದನ್ನು ಬಿಟ್ಟು ಕೆಲಸಮಾಡಿ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಆದ್ಯತಾ ವಲಯದಲ್ಲಿ ವಾರ್ಷಿಕ ಗುರಿಗೆ ಸೆಪ್ಟೆಂಬರ್ ಮಾಹೆವರೆಗೆ ಶೇ.53ರಷ್ಟು ಗುರಿ ಸಾಧಿಸಲಾಗಿದೆ. ಹಾನಗಲ್, ಹಾವೇರಿ, ಸವಣೂರ ಹಾಗೂ ಶಿಗ್ಗಾಂವಿ ತಾಲೂಕುಗಳಲ್ಲಿ ಸಾಧನೆ ಪ್ರಮಾಣ ಕಡಿಮೆ ಇದ್ದು, ಇದನ್ನು ಪರಿಶೀಲಿಸಿ, ಹೆಚ್ಚಿನ ಪ್ರಮಾಣದ ಪ್ರಗತಿ ಮಾಡಲು ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಸೂಚನೆ ನೀಡಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭದೇವ ಅವರು ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪುನಿತ್, ಬ್ಯಾಂಕ್ ಅಧಿಕಾರಿಗಳಾದ ಸೂರಜ್ ಎನ್, ನಬಾರ್ಡ್ನ ರಂಗನಾಥ್ ಹಾಗೂ ಇತರ ಬ್ಯಾಂಕ್‌ಗಳ ಪ್ರಾದೇಶಿಕ ಅಧಿಕಾರಿಗಳು ಉಪಸ್ಥಿತರಿದ್ದರು.