ಬ್ರಹ್ಮಾವರ: ಪೇಜಾವರ ಮಠದ ಪೀಠಾಧಿಪತಿಗಳಾಗಿದ್ದ ಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ತಮ್ಮ ಪ್ರಗತಿಪರ ಚಿಂತನೆಗಳಿಂದ ನಾಡಿನ ಜನರ ಮನಗೆದ್ದಿದ್ದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ಅವರು ಇಲ್ಲಿನ ನೀಲಾವರದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸ್ಮರಣಾರ್ಥ ನಿರ್ಮಿಸಲಾಗಿರುವ ಪೇಜಾವರ ಶ್ರೀ ಸ್ಮೃತಿವನ ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ, ಪರಿಸರ ಸಂರಕ್ಷಣೆಯ ಕ್ಷೇತ್ರಕ್ಕೂ ಶ್ರೀಗಳು ನೀಡಿರುವ ಕೊಡುಗೆ ಅಪಾರವಾದ್ದು, ಅವರು ನಕ್ಸಲರ ಮನವೊಲಿಸುವ ಕಾರ್ಯವನ್ನೂ ಮಾಡಿದ್ದರು, ಸದಾ ಶಾಂತಿಯನ್ನು ಪ್ರತಿಪಾದಿಸುತ್ತಿದ್ದರು ಎಂದರು.ಕೋಟಿ ರು. ಅನುದಾನ: ಶ್ರೀ ಪೇಜಾವರ ಶ್ರೀಗಳ ಹೆಸರಿನ ಸ್ಮೃತಿವನ ಉದ್ಘಾಟಿಸುತ್ತಿರುವುದು ನಮ್ಮ ಸೌಭಾಗ್ಯ ಎಂದ ಅರಣ್ಯ ಸಚಿವರು, ನೀಲಾವರದ ಸ್ಮೃತಿವನದ ಸಮೀಪದಲ್ಲೇ 2 ಎಕರೆ ಪ್ರದೇಶದಲ್ಲಿ ಮತ್ತೊಂದು ವನ ನಿರ್ಮಿಸಲು ಮುಂದಾಗಿರುವ ಮಠಕ್ಕೆ 1 ಕೋಟಿ ರು. ಅನುದಾನ ನೀಡುವ ಭರವಸೆ ನೀಡಿದರು.ಆರು ತಿಂಗಳ ಹಿಂದೆ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದಗಂಗಾಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲೂ ಸ್ಮೃತಿವನ ಉದ್ಘಾಟಿಸಿದ್ದನ್ನು ಸಚಿವರು ಸ್ಮರಿಸಿದರು. ಬೆಂಗಳೂರು ಯಲಹಂಕ ಬಳಿ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿಪಡಿಸಲು ಕ್ರಮವಹಿಸಿದ್ದು, 50 ಕೋಟಿ ರೂ. ತೆಗೆದಿರಿಸಲಾಗಿದೆ ಎಂದರು.ಘಟ್ಟ ಸಂರಕ್ಷಣೆ ಎಲ್ಲರ ಹೊಣೆ: ಮಳೆಯ ಮಾರುತಗಳನ್ನು ತಡೆದು ವ್ಯಾಪಕ ಮಳೆ ಸುರಿಸುವ ಪಶ್ಚಿಮಘಟ್ಟಗಳು ಜೀವವೈವಿಧ್ಯದ 8ನೇ ನೆಚ್ಚಿನ ತಾಣವಾಗಿದ್ದು, ಹಲವು ಪ್ರಭೇದದ ಸಸ್ಯಸಂಕುಲ, ಕೀಟಸಂಕುಲ, ಜೀವಸಂಕುಲದ ತವರಾಗಿದೆ. ಇದನ್ನು ಸರ್ಕಾರ, ಅರಣ್ಯ ಇಲಾಖೆ ಮಾತ್ರ ರಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಮುಂದಾಗಬೇಕು ಎಂದರು.12,500 ಎಕರೆ ಒತ್ತುವರಿ ತೆರವು: ತಾವು ಸಚಿವರಾದ ತರುವಾಯ ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರು. ಬೆಲೆಬಾಳುವ 250 ಎಕರೆ ಸೇರಿದಂತೆ, ರಾಜ್ಯದಲ್ಲಿ ಒಟ್ಟು 12500 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಿರುದಾಗಿ ಮತ್ತು ಅತಿಕ್ರಮವಾಗಿರುವ 50 ಸಾವಿರ ಕೋಟಿ ರು. ಬೆಲೆ ಬಾಳುವ ಅರಣ್ಯ ಭೂಮಿಯ ಮರು ವಶಕ್ಕೆ ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂಬುದಾಗಿಯೂ ಖಂಡ್ರೆ ಅವರು ಹೇಳಿದರು.
ಮಾನವ - ಆನೆ ಸಂಘರ್ಷ ತಡೆ: ರಾಜ್ಯ 6395 ಆನೆಗಳೊಂದಿಗೆ ದೇಶದಲ್ಲೇ ಅತಿ ಹೆಚ್ಚು ಆನೆ ಇರುವ ರಾಜ್ಯವಾಗಿದೆ. ಅದೇ ರೀತಿ ಹುಲಿಯ ಸಂಖ್ಯೆಯಲ್ಲಿ 563 ಹುಲಿಗಳೊಂದಿಗೆ 2ನೇ ಸ್ಥಾನದಲ್ಲಿದೆ. ಅದರ ಜೊತೆಗೆ ಮಾನವ-ಆನೆ ಸಂಘರ್ಷವೂ ಹೆಚ್ಚಾಗಿದೆ. ಹೀಗಾಗಿ ಈ ಸಂಘರ್ಷ ತಗ್ಗಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿರುವುದಾಗಿ ಹೇಳಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ತ್ರಿಪಾಠಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್ ಮತ್ತಿತರರು ಭಾಗಿಯಾಗಿದ್ದರು.ಮಹಾವನ ನಿರ್ಮಾಣಕ್ಕೆ ಸಿದ್ಧ: ಪೇಜಾವರ ಶ್ರೀ: ಸಾನಿಧ್ಯ ವಹಿಸಿದ್ದ ಪೇಜಾವರದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ತಮ್ಮ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸ್ಮೃತಿವನ ಸಾಕಾರಕ್ಕೆ ಸಹಕಾರ ನೀಡಿದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಅಭಿನಂದಿಸಿದರು.2031 ಶ್ರೀ ವಿಶ್ವೇಶ ತೀರ್ಥರ ಜನ್ಮ ಶತಮಾನೋತ್ಸವ ವರ್ಷವಾಗಿದ್ದು, ಅವರ ಹೆಸರಿನಲ್ಲಿ ಒಂದು ಮಹಾವನ ನಿರ್ಮಿಸುವ ಕನಸಿದೆ. ಸರ್ಕಾರ 1 ಸಾವಿರ ಎಕರೆ ಬರಡು ಭೂಮಿ ನೀಡಿದರೂ ಮಹಾವನ ನಿರ್ಮಿಸಲು ಶ್ರೀಮಠ ಸಿದ್ಧ ಎಂದು ಹೇಳಿದರು. ಇದಕ್ಕೆ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.