ಸಾರಾಂಶ
ದೊಡ್ಡಬಳ್ಳಾಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ಎಸ್‌ಡಿಪಿಐ, ಭೀಮಸೇನೆ, ತಾಲೂಕು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐ ಸಂಘಟನೆಯ ಸೈಯದ್ ಬಾಬಾ, ಬಿಜೆಪಿ ಸರ್ಕಾರ ಸಂವಿಧಾನವನ್ನು ಬದಲಿಸುತ್ತೇವೆ ಎನ್ನುತ್ತಿದೆ. ಮುಸಲ್ಮಾನರಾದ ನಾವು ಸಾವಿರಾರು ಸಂಖೆಯಲ್ಲಿದ್ದೇವೆ. ನಮ್ಮ ಯುವಕರು ನಾವು ಪ್ರಾಣವನ್ನಾದರೂ ಅರ್ಪಿಸಿ ಈ ದೇಶಕ್ಕೆ ಬಾಬಾ ಸಾಹೇಬರು ನೀಡಿರುವ ಸಂವಿಧಾನವನ್ನು ಉಳಿಸಿಕೊಳ್ಳಲು ಬದ್ಧವಾಗಿದ್ದೇವೆ ಎಂದು ಹೇಳಿದರು.ತಾಲೂಕು ರೈತ ಮುಖಂಡ ರಮೇಶ್ ಸಂಕ್ರಾಂತಿ ಮಾತನಾಡಿ, ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ, ಚಹಾ ಮಾರುತ್ತಿದ್ದ ನನ್ನಂತವರು ಬಾಬಾ ಸಾಹೇಬರು ಬರೆದಿರುವ ಸಂವಿಧಾನದ ಕಾರಣದಿಂದ ಈ ದೇಶದ ಪ್ರಧಾನಿಯಾಗಲು ಸಾಧ್ಯವಾಯಿತು ಎನ್ನುತ್ತಾರೆ. ಇನ್ನೊಂದು ಕಡೆ ಜೈಲಲ್ಲಿ ಇರಬೇಕಾಗಿದ್ದ ಅಮಿತ್ ಶಾ ಈ ದೇಶದ ಗೃಹ ಮಂತ್ರಿಯಾಗಿರುವುದೇ ಈ ದೇಶದ ದುರಂತ. ಇಂತಹ ಕೈಗೆ ಆಡಳಿತ ಯಂತ್ರ ಕೊಟ್ಟರೆ, ಸಂವಿಧಾನ ಬದಲಾವಣೆ, ಸಂವಿಧಾನ ರಚಿಸಿದವರಿಗೆ ಅವಮಾನ ಅಲ್ಲದೆ, ಅವರಿಂದ ನಾವು ಮತ್ತೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ದೇಶ ಮುಂದಿನ ದಿನಗಳಲ್ಲಿ ಇನ್ನು ಎಂತೆಂತ ದೌರ್ಭಾಗ್ಯಗಳನ್ನು ಕಾಣಬೇಕಿದೆಯೋ ಎಂದು ವಿಷಾದಿಸಿದ ಅವರು, ಸಂವಿಧಾನದಡಿಯಲ್ಲೇ ಕಾರ್ಯ ನಿರ್ವಹಿಸುತ್ತಲೇ ಅಂಬೇಡ್ಕರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೊಟ್ಟು ಅವರನ್ನು ಅವಮಾನಿಸುವ ಅಮಿತ್ ಶಾ ಗೃಹಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಅವರು ಕೂಡಲೇ ರಾಜೀನಾಮೆ ಕೊಡಬೇಕು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮತ್ತು ಎಸ್‌ಡಿಪಿಐ ತಾಲೂಕು ಉಪಾಧ್ಯಕ್ಷ ಫಯಾಜ್ ಅಹಮದ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ, ಸೖಯದ್ ಬಾಬಾ, ಸದಸ್ಯರಾದ ಬಾಬಾ ಜಾನು, ಸಲ್ಮಾನ್, ಫೖರೋಜ್ ಮುಬಾರಕ್, ಇಲಿಯಾಜ್ ಮುಂತಾದವರು ಉಪಸ್ಥಿತರಿದ್ದರು.
ಫೋಟೋ 21ಕೆಡಿಬಿಪಿ2-ದೊಡ್ಡಬಳ್ಳಾಪುರದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.