ಸಾರಾಂಶ
ತಾಲೂಕಿನ ಯಾವುದೇ ಅಂಗಡಿಗಳಲ್ಲಿ ನಿಷೇಧಿತ ತಂಬಾಕು ವಸ್ತುಗಳನ್ನು ಮಾರುವಂತಿಲ್ಲ ಎಂದು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಪ್ರಕಾಶ ಸಿಂದಗಿ ಹೇಳಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಯಾವುದೇ ಅಂಗಡಿಗಳಲ್ಲಿ ನಿಷೇಧಿತ ತಂಬಾಕು ವಸ್ತುಗಳನ್ನು ಮಾರುವಂತಿಲ್ಲ ಎಂದು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ವಿವಿಧ ವೃತ್ತಗಳ ಪಾನ್ ಅಂಗಡಿಗಳ ಮೇಲೆ ಬುಧವಾರ ಆರೋಗ್ಯ ಇಲಾಖೆ ಕಂದಾಯ ಇಲಾಖೆ ಹಾಗೂ ಪ.ಪಂ ತಂಬಾಕು ನಿಯಂತ್ರಣ ಘಟಕದ ಸಹಯೋಗದಲ್ಲಿ ಹಲವಾರು ಅಂಗಡಿಗಳ ಮೇಲೆ ದಾಳಿ ನಡೆಸಿ, ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ತರಹದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾರುವಂತಿಲ್ಲ ಹಾಗೂ ತಂಬಾಕು ಉತ್ಪನ್ನ ಮಾರುವುದರಿಂದ ಜನರಿಗೆ ಆಗುವಂತಹ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಶಾಲಾ-ಕಾಲೇಜು ಆವರಣ ಹಾಗೂ ಸಾರ್ವಜನಿಕ ಪ್ರದೇಶ ಅಂಗಡಿಗಳ ಮೇಲೆ ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂದೀಪ್ ಕಡ್ಲವಾಡ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಮಾರಕವಾದ ನಿಷೇಧಿತ ತಂಬಾಕು ಉತ್ಪನ್ನ ಮಾರುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪಟ್ಟಣದ ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಣಾಧಿಕಾರಿ ರಾಮನಗೌಡ ಪಾಟೀಲ, ಪೊಲೀಸ್ ಇಲಾಖೆಯ ಎ.ಎಸ್.ಐ ಡಿ.ಎಚ್.ಬಗಲಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಕಿರಣ್ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.